ಮದ್ಯದಂಗಡಿಗಳಿಂದ ಸಂಗ್ರಹಿಸುತ್ತಿದ್ದ ಪಕ್ಷದ ದೇಣಿಗೆಗೆ ಸಿಎಂ ವಿಜಯ್ ಬ್ರೇಕ್!
ಚೆನ್ನೈ: ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳಿಂದ ಪಕ್ಷದ ದೇಣಿಗೆ ಹೆಸರಲ್ಲಿ ಸಂಗ್ರಹಿಸಲಾಗುತ್ತಿದ್ದ ಮಾಸಿಕ 102 ಕೋಟಿ ರೂ. ಹಣಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ತಡೆ ಒಡ್ಡಿದ್ದಾರೆ. ಯಾವುದೇ ಅಧಿಕಾರಿ ಈ ಹಣ ಸಂಗ್ರಹಿಸಿದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಂಪುಟ ಸಭೆಯ ವೇಳೆ ತಿಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ನಡೆದ ಸಂಪುಟ ಸಭೆಯ ವೇಳೆ ಈ ವಿಷಯವನ್ನು ಅಧಿಕಾರಿಯೊಬ್ಬರು ವಿಜಯ್ ಅವರ ಗಮನಕ್ಕೆ ತಂದರು. ಈ ವೇಳೆ ಪ್ರತಿಕ್ರಿಯಿಸಿದ ವಿಜಯ್, ಇಂತಹ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ ಟಿವಿಕೆ ಇಂತಹ ಭ್ರಷ್ಟ ಹಣದಿಂದ ನಡೆಯುವುದಿಲ್ಲ. ಅಧಿಕೃತವಾಗಿ ಮದ್ಯದಂಗಡಿಗಳಿಂದ ಏನು ಸಂಗ್ರಹವಾಗಬೇಕೋ ಅಷ್ಟನ್ನು ಮಾತ್ರ ಸಂಗ್ರಹಿಸಬೇಕು. ಅಂಥ ಹಣದಲ್ಲಿ ಪ್ರತಿ ರುಪಾಯಿಯೂ ಸರ್ಕಾರಿ ಖಜಾನೆಗೆ ಸೇರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳಿಂದ ಪಕ್ಷದ ದೇಣಿಗೆ ಹೆಸರಲ್ಲಿ 102 ಕೋಟಿ ರೂ.ಗಳನ್ನು ಸಂಗ್ರಹಿಸಲಾಗುತ್ತದೆ. ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಸರ್ಕಾರಕ್ಕೆ 1600 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.