Select Location
All Locations
State
Region
City / District
FIFA World Cup 2026: ಸೌದಿ ಅರೇಬಿಯಾ ವಿರುದ್ಧ ಸ್ಪೇನ್‌ಗೆ 4-0 ಭರ್ಜರಿ ಜಯ

FIFA World Cup 2026: ಸೌದಿ ಅರೇಬಿಯಾ ವಿರುದ್ಧ ಸ್ಪೇನ್‌ಗೆ 4-0 ಭರ್ಜರಿ ಜಯ

ಅಟ್ಲಾಂಟಾ: ಮೊದಲ ಪಂದ್ಯದಲ್ಲಿ ಕೇಪ್ ವರ್ಡೆ ವಿರುದ್ಧ ಯಾವುದೇ ಗೋಲು ಬಾರಿಸದೆ ಡ್ರಾ ಮಾಡಿಕೊಂಡು ನಿರಾಸೆ ಅನುಭವಿಸಿದ್ದ ಸ್ಪೇನ್ ತಂಡ, ಇದೀಗ ಟೂರ್ನಿಯಲ್ಲಿ ಅಬ್ಬರದ ಜಯಭೇರಿ ಬಾರಿಸಿದೆ. ಇಲ್ಲಿನ ಅಟ್ಲಾಂಟಾ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ 'H' ಪಂದ್ಯದಲ್ಲಿ ಸ್ಪೇನ್, ಸೌದಿ ಅರೇಬಿಯಾ ತಂಡವನ್ನು 4-0 ಗೋಲುಗಳ ಅಂತರದಿಂದ ಹೀನಾಯವಾಗಿ ಸೋಲಿಸುವ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ.

ಈ ಪಂದ್ಯದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು 18 ವರ್ಷದ ಯುವ ಆಟಗಾರ ಲಮೀನ್ ಯಮಾಲ್. ಮೊದಲ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಬಾರ್ಸಿಲೋನಾ ಕ್ಲಬ್‌ನ ಈ ಸ್ಟಾರ್ ವಿಂಗರ್, ಈ ಪಂದ್ಯದಲ್ಲಿ ಆರಂಭಿಕ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರು. ಪಂದ್ಯ ಆರಂಭವಾದ ಕೇವಲ 10ನೇ ನಿಮಿಷದಲ್ಲೇ ಮೈಕೆಲ್ ಒಯಾರ್ಜಾಬಲ್ ನೀಡಿದ ಅತ್ಯುತ್ತಮ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದ ಯಮಾಲ್, ಸ್ಪೇನ್ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇದು ಅವರ ಚೊಚ್ಚಲ ವಿಶ್ವಕಪ್ ಗೋಲು ಕೂಡ ಹೌದು. ಈ ಗೋಲಿನೊಂದಿಗೆ ಯಮಾಲ್ ವಿಶ್ವಕಪ್ ಇತಿಹಾಸದಲ್ಲಿ ಪಂದ್ಯವೊಂದರ ಮೊದಲ ಗೋಲು ಗಳಿಸಿದ ಎರಡನೇ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಇದಕ್ಕೂ ಮುನ್ನ 1958ರಲ್ಲಿ ಬ್ರೆಜಿಲ್‌ನ ದಂತಕಥೆ ಪೀಲೆ ವೇಲ್ಸ್ ವಿರುದ್ಧ ಈ ಸಾಧನೆ ಮಾಡಿದ್ದರು.

ಯಮಾಲ್ ಆರಂಭಿಕ ಯಶಸ್ಸು ತಂದುಕೊಟ್ಟರೆ, ಸ್ಟ್ರೈಕರ್ ಮೈಕೆಲ್ ಒಯಾರ್ಜಾಬಲ್ ಸೌದಿ ರಕ್ಷಣಾ ಕೋಟೆಯನ್ನು ಧ್ವಂಸಗೊಳಿಸಿದರು. ಪಂದ್ಯದ ಮೊದಲಾರ್ಧದ ಕೆಲವೇ ನಿಮಿಷಗಳ ಅಂತರದಲ್ಲಿ ಒಯಾರ್ಜಾಬಲ್ ಸೌದಿ ಗೋಲ್‌ಕೀಪರ್ ಮೊಹಮ್ಮದ್ ಅಲ್ ಒವೈಸ್ ಅವರನ್ನು ವಂಚಿಸಿ ಸತತ 2 ಅದ್ಭುತ ಗೋಲುಗಳನ್ನು ಬಾರಿಸಿದರು. ಇದರೊಂದಿಗೆ ಪಂದ್ಯದ 24ನೇ ನಿಮಿಷಕ್ಕೇ ಸ್ಪೇನ್ 3-0 ಭರ್ಜರಿ ಮುನ್ನಡೆ ಕಾಯ್ದುಕೊಂಡಿತು. ದ್ವಿತೀಯಾರ್ಧದ ಆರಂಭದಲ್ಲೇ ಸೌದಿ ಅರೇಬಿಯಾದ ಹಸನ್ ಅಲ್ತಾಂಬಾಕ್ತಿ ಅವರು ಹೊಡೆದ ಗೋಲು ಸ್ಪೇನ್ ಮುನ್ನಡೆಯನ್ನು 4-0ಗೆ ಹೆಚ್ಚಿಸಿತು. ಪಂದ್ಯದ ಕೊನೆಯಲ್ಲಿ ಫೆರಾನ್ ಟೊರೆಸ್ ಬಾರಿಸಿದ ಮತ್ತೊಂದು ಗೋಲನ್ನು ಸುದೀರ್ಘ ಪರಿಶೀಲನೆಯ ಬಳಿಕ ತೀರ್ಪುಗಾರರು ತಿರಸ್ಕರಿಸಿದರು. ಇಲ್ಲದಿದ್ದರೆ ಸೌದಿ ಅರೇಬಿಯಾದ ಸೋಲಿನ ಅಂತರ ಮತ್ತಷ್ಟು ಹೆಚ್ಚಾಗುತ್ತಿತ್ತು. ಈ ಭರ್ಜರಿ ಗೆಲುವಿನೊಂದಿಗೆ ಸ್ಪೇನ್ ತಂಡವು ಆಡಿದ ಎರಡು ಪಂದ್ಯಗಳಿಂದ 4 ಅಂಕಗಳನ್ನು ಗಳಿಸಿ ಮುನ್ನಡೆದಿದೆ. ಮೊದಲ ಪಂದ್ಯದ ನೀರಸ ಪ್ರದರ್ಶನದಿಂದ ಕಂಗೆಟ್ಟಿದ್ದ ಅಭಿಮಾನಿಗಳಲ್ಲಿ ಈ ಗೆಲುವು ಹೊಸ ಭರವಸೆ ಮೂಡಿಸಿದೆ. ಸ್ಪೇನ್ ತಂಡವು ತನ್ನ ಮುಂದಿನ ಹಾಗೂ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ಉರುಗ್ವೆ ತಂಡವನ್ನು ಎದುರಿಸಲಿದೆ.


Udayavani 1 hour ago
Home Flash News