Operation Tiger: ಶಿವಸೇನೆಗೆ ಬಿಗ್ ಶಾಕ್; ಶಿಂಧೆ ಬಣಕ್ಕೆ ಸೇರಲಿದ್ದಾರೆ 6 ಸಂಸದರು!
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ 'ಆಪರೇಷನ್ ಟೈಗರ್' ಯಶಸ್ವಿಯಾಗಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ಪಕ್ಷದ ಆರು ಲೋಕಸಭಾ ಸಂಸದರು ಇಂದು (ಜೂ.22) ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಆಡಳಿತಾರೂಢ ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆಯಿಂದ ಪಾರಾಗಲು ಅಗತ್ಯವಿರುವ ಮೂರನೇ ಎರಡರಷ್ಟು (2/3) ಬಹುಮತವನ್ನು ಈ ಬಂಡಾಯ ಸಂಸದರ ಗುಂಪು ಹೊಂದಿದ್ದು, ಶಿಂಧೆ ಬಣದೊಂದಿಗೆ ವಿಲೀನಗೊಳ್ಳಲು ಸರ್ವ ಸನ್ನದ್ಧವಾಗಿದೆ. ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ‘ಆಪರೇಷನ್ ಟೈಗರ್’ ಯಶಸ್ವಿಯಾಗಿರುವುದನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ಆಪರೇಷನ್ ಯಶಸ್ವಿಯಾಗಿದೆ ಮತ್ತು ರೋಗಿಯ ಆರೋಗ್ಯ ತುಂಬಾ ಚೆನ್ನಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆತ್ಮಾವಲೋಕನ ಮಾಡಿಕೊಳ್ಳಬೇಕಾದವರು ಮಾಡಿಕೊಳ್ಳಲಿ," ಎಂದು ಉದ್ಧವ್ ಠಾಕ್ರೆ ಅವರಿಗೆ ಟಾಂಗ್ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ, "ನಾನು ಯಾವುದೇ ಆಪರೇಷನ್ ಕೈಗೆತ್ತಿಕೊಂಡರೂ ಅದನ್ನು ಪೂರ್ಣಗೊಳಿಸಿಯೇ ಸಿದ್ಧ. ಶೀಘ್ರದಲ್ಲೇ ನಿಮಗೆ ಬ್ರೇಕಿಂಗ್ ನ್ಯೂಸ್ ಸಿಗಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೂನ್ 17 ರಂದು ದೆಹಲಿಯಲ್ಲಿ ನಡೆದ ಶಿವಸೇನಾ (UBT) ಸಂಸದೀಯ ಮಂಡಳಿ ಸಭೆಗೆ ಗೈರುಹಾಜರಾಗುವ ಮೂಲಕ ಬಂಡಾಯದ ಮುನ್ಸೂಚನೆ ನೀಡಿದ್ದ ಆರು ಸಂಸದರಲ್ಲಿ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶ್‌ಮುಖ್, ಸಂಜಯ್ ಜಾಧವ್, ಭೌಸಾಹೇಬ್ ವಾಕ್ಚೌರೆ, ನಾಗೇಶ್ ಪಾಟೀಲ್ ಅಷ್ಟಿಕರ್ (ಹಿಂಗೋಲಿ ಸಂಸದ), ಓಂಪ್ರಕಾಶ್ ರಾಜೇ ನಿಂಬಾಳ್ಕರ್ (ಧಾರಾಶಿವ್ ಸಂಸದ) ಸೇರಿದ್ದಾರೆ. ಶಿವಸೇನಾ (UBT) ಪ್ರಸ್ತುತ ಒಟ್ಟು 9 ಲೋಕಸಭಾ ಸಂಸದರನ್ನು ಹೊಂದಿದ್ದು, ಅನರ್ಹತೆಯಿಂದ ಬಚಾವಾಗಲು ಬಂಡಾಯ ಬಣಕ್ಕೆ ಕನಿಷ್ಠ 6 ಸಂಸದರ ಬೆಂಬಲ ಬೇಕಿತ್ತು.
ಈಗ ಆರೂ ಸಂಸದರು ಒಟ್ಟಾಗಿ ಶಿಂಧೆ ಬಣ ಸೇರುತ್ತಿರುವುದರಿಂದ ಕಾನೂನು ಸಂಕಷ್ಟದಿಂದ ಪಾರಾಗಲಿದ್ದಾರೆ. ತುರ್ತು ಸಭೆ ಕರೆದ ಉದ್ಧವ್ ಠಾಕ್ರೆ: ಬಂಡಾಯದ ಕಾಳ್ಗಿಚ್ಚು ಹರಡುತ್ತಿದ್ದಂತೆ ಎಚ್ಚೆತ್ತಿರುವ ಉದ್ಧವ್ ಠಾಕ್ರೆ, ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನವೇ (ಸೋಮವಾರ) ಮಧ್ಯಾಹ್ನ 2.30ಕ್ಕೆ ನಾರಿಮನ್ ಪಾಯಿಂಟ್‌ನಲ್ಲಿರುವ ಪಕ್ಷದ ಕಚೇರಿ ‘ಶಿವಾಲಯ’ದಲ್ಲಿ ಶಾಸಕರು (MLA) ಮತ್ತು ವಿಧಾನ ಪರಿಷತ್ ಸದಸ್ಯರ (MLC) ತುರ್ತು ಸಭೆ ಕರೆದಿದ್ದಾರೆ. ಉಳಿದ ಜನಪ್ರತಿನಿಧಿಗಳನ್ನಾದರೂ ಒಟ್ಟಾಗಿ ಇಟ್ಟುಕೊಳ್ಳಲು ಉದ್ಧವ್ ಕಸರತ್ತು ನಡೆಸುತ್ತಿದ್ದಾರೆ.