ಟ್ರಂಪ್-ಮೆಲೊನಿ ಮುನಿಸು: ಅಮೆರಿಕ-ಇಟಲಿ ನಡುವೆ ರಾಜತಾಂತ್ರಿಕ ಬಿಕ್ಕಟ್ಟು
ಅಮೆರಿಕವು ಇರಾನ್ ವಿರುದ್ಧ ನಡೆಸಿದ ಮಿಲಿಟರಿ ಕಾರ್ಯಾಚರಣೆಗೆ ಇಟಲಿ ಬೆಂಬಲ ನೀಡಿರಲಿಲ್ಲ. ಅದಲ್ಲದೆ ಅಮೆರಿಕದ ಯುದ್ಧವಿಮಾನಗಳು ಇಟಲಿಯ ವಾಯುನೆಲೆಗಳನ್ನು ಬಳಕೆ ಮಾಡುವುದಕ್ಕೆ ಮೆಲೊನಿ ನೇತೃತೃದ ಇಟಲಿ ಸರ್ಕಾರ ಅನುಮತಿ ನಿರಾಕರಿಸಿತ್ತು. ಇದು ಟ್ರಂಪ್ ಅವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪೋಪ್ ಖಂಡನೆ: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಯನ್ನು ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಗುರು 14ನೇ ಪೋಪ್ ಲಿಯೊ ಅವರು ಖಂಡಿಸಿದ್ದರು. ಇದರ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪೋಪ್ ಪರವಾಗಿ ನಿಂತಿದ್ದ ಮೆಲೊನಿ, ಟ್ರಂಪ್ ಹೇಳಿಕೆಯನ್ನು ಖಂಡಿಸಿದ್ದರು. ಜಿ-7 ಶೃಂಗಸಭೆಯಲ್ಲಿ ಫೋಟೊ ವಿವಾದ: ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ ಜಿ-7 ಶೃಂಗಸಭೆಯ ನಂತರ ಟ್ರಂಪ್ ಮಾಧ್ಯಮವೊಂದರಲ್ಲಿ 'ಮೆಲೊನಿ ನನ್ನ ಜೊತೆ ಫೋಟೊ ತೆಗೆದುಕೊಳ್ಳಲು ಪದೇ ಪದೇ ಬೇಡಿಕೊಂಡಿದ್ದರು' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಮೆಲೊನಿ 'ನಾನಾಗಲಿ ಇಟಲಿಯಾಗಲಿ ಯಾರ ಬಳಿ ಬೇಡುವುದಿಲ್ಲ. ಟ್ರಂಪ್ ಸುಳ್ಳು ಕಥೆ ಕಟ್ಟುತ್ತಿದ್ದಾರೆ' ಎಂದು ತಿರುಗೇಟು ನೀಡಿದ್ದರು. ಬಹುಶಃ ಅಮೆರಿಕವನ್ನು ಕಡೆಗಣಿಸಿದ್ದಕ್ಕಾಗಿ ಇಟಲಿಯಲ್ಲಿ ಮೆಲೊನಿ ಜನಪ್ರಿಯತೆ ಕುಸಿದಿದೆ. ಈ ಸಂದರ್ಭದಲ್ಲಿ ಇಟಲಿಯ ವಿದೇಶಾಂಗ ನೀತಿಯನ್ನು ಟ್ರಂಪ್ ಟೀಕಿಸಿದ್ದರು. 'ಆದರೆ ನನ್ನ ಜನಪ್ರಿಯತೆ ಬಗ್ಗೆ ನಿಮಗೆ ಚಿಂತೆ ಬೇಡ. ನೀವು ನಿಮ್ಮ ವಿಷಯಗಳ ಬಗ್ಗೆ ಗಮನ ಹರಿಸಿ' ಎಂದು ಮೆಲೊನಿ ಹೇಳಿದ್ದರು. ಅಮೆರಿಕ-ಇಟಲಿ ರಾಜತಾಂತ್ರಿಕ ಬಾಂಧವ್ಯದಲ್ಲಿ ಬಿರುಕು: ಟ್ರಂಪ್ ಹಾಗೂ ಮೆಲೊನಿ ನಡುವಣ ವೈಯಕ್ತಿಕ ಜಗಳ ಅಮೆರಿಕ ಹಾಗೂ ಇಟಲಿ ನಡುವೆ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಟ್ರಂಪ್ ಅವರ ಹೇಳಿಕೆಯಿಂದ ಬೇಸತ್ತ ಇಟಲಿಯ ವಿದೇಶಾಂಗ ಸಚಿವರು ತಮ್ಮ ನಿಗದಿತ ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಇಟಲಿಯ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಟ್ರಂಪ್ ಹೇಳಿಕೆಯು ಇಡೀ ಇಟಲಿ ದೇಶಕ್ಕೆ ಮಾಡಿದ ಅಪಮಾನ ಎಂದು ಖಂಡಿಸುತ್ತಿರುವುದರಿಂದ ರಾಜತಾಂತ್ರಿಕ ವಲಯದಲ್ಲಿ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ನ್ಯಾಟೊ ಮಿತ್ರರಾಷ್ಟ್ರಗಳಲ್ಲಿ ಬಿರುಕು: ಯುರೋಪಿನಲ್ಲಿ ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳಲ್ಲಿ ಇಟಲಿ ಕೂಡ ಒಂದು. ಆದರೆ ಇಟಲಿ ತನಗೆ ಸಹಕರಿಸುತ್ತಿಲ್ಲ ಎಂದು ಟ್ರಂಪ್ ಬಹಿರಂಗವಾಗಿ ದೂರಿದ್ದಾರೆ. ಇದರಿಂದಾಗಿ ನ್ಯಾಟೊ ಮಿತ್ರರಾಷ್ಟ್ರಗಳಲ್ಲಿ ಭದ್ರತಾ ಸಹಕಾರ ಮತ್ತು ಪ್ರಮುಖ ನಿರ್ಣಯಗಳಿಗೆ ಹಿನ್ನಡೆಯಾಗುವ ಭೀತಿ ಕಾಡುತ್ತಿದೆ. ಯುರೋಪ್ ಮತ್ತು ಅಮೆರಿಕದ ನಡುವೆ ಅಂತರ: ಮೆಲೊನಿ ಅವರು ಐರೋಪ್ಯ ಒಕ್ಕೂಟ (ಇಯು) ಮತ್ತು ಅಮೆರಿಕದ ನಡುವೆ ಒಂದು ಸೇತುವೆಯಾಗಿ ಕೆಲಸ ಮಾಡಲು ಬಯಸಿದ್ದರು. ಆದರೆ ಈಗ ಮೂಡಿರುವ ಬಿರುಕಿನಿಂದಾಗಿ, ಇಟಲಿ ಮಾತ್ರವಲ್ಲದೆ ಇಡೀ ಯುರೋಪ್ ಖಂಡದಲ್ಲಿ ಅಮೆರಿಕದ ಬಗೆಗಿನ ವಿಶ್ವಾಸಾರ್ಹತೆ ಕಡಿಮೆಯಾಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಟ್ರಂಪ್ ಹಾಗೂ ಮೆಲೊನಿ ನಡುವಣ ಭಿನ್ನಾಭಿಪ್ರಾಯಗಳು ಅಮೆರಿಕ-ಇಟಲಿ ನಡುವಿನ ಸಾಂಪ್ರದಾಯಿಕ ಸ್ನೇಹ ಬಾಂಧವ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.