ಮತದಾರರ ಪಟ್ಟಿ ಪರಿಷ್ಕರಣೆ: ಕೋಲಾರ ಮತ್ತು ಮೈಸೂರಿನಲ್ಲಿ ಗಂಭೀರ ಕರ್ತವ್ಯ ಲೋಪ; ಅಧಿಕಾರಿಗಳಿಗೆ ನೋಟಿಸ್!
ಕರ್ನಾಟಕದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (SIR) ಲೋಪ ಎಸಗಿದ ಕೋಲಾರ ತಹಶೀಲ್ದಾರ್, ಎಸಿ ಹಾಗೂ ಬಿಎಲ್‌ಒಗಳಿಗೆ ನೋಟಿಸ್ ನೀಡಲಾಗಿದೆ. ಇತ್ತ ಮೈಸೂರಿನಲ್ಲೂ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದ್ದು, ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ವೈ. ವಿಜಯೇಂದ್ರ ಆಡಳಿತ ಯಂತ್ರ ದುರುಪಯೋಗದ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಬೆಂಗಳೂರು, ಜುಲೈ 04:
ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತೀವ್ರ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಕೋಲಾರದಲ್ಲಿ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ (AC) ಸೇರಿದಂತೆ ಐವರು ಬಿಎಲ್‌ಒಗಳಿಗೆ (Booth Level Officers) ಜಿಲ್ಲಾಧಿಕಾರಿಗಳು ಖಡಕ್ ನೋಟಿಸ್ ಜಾರಿ ಮಾಡಿದ್ದಾರೆ. ಇತ್ತ ಮೈಸೂರಿನಲ್ಲೂ ಮನೆ ಮನೆಗೆ ತೆರಳದೆ ನಿಯಮ ಉಲ್ಲಂಘಿಸಿ ಸಾಮೂಹಿಕವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮನೆ ಮನೆಗೆ ಹೋಗದ ಬಿಎಲ್‌ಒಗಳಿಗೆ ಬಿಗ್ ಶಾಕ್! ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನೆ ಮನೆಗೆ ಭೇಟಿ ನೀಡಲೇಬೇಕು ಎಂದು ಖಡಕ್ ಸೂಚನೆ ನೀಡಿದ್ದರು. ಆದರೆ ಕೋಲಾರದ ಮತಗಟ್ಟೆ ಸಂಖ್ಯೆ 185 ರಿಂದ 189 ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಬಿಎಲ್‌ಒಗಳು ನಿಯಮಗಳನ್ನು ಗಾಳಿಗೆ ತೂರಿ, ಸಾರ್ವಜನಿಕರನ್ನು ಒಂದೆಡೆ ಗುಂಪು ಸೇರಿಸಿ ಪರಿಷ್ಕರಣೆ ನಡೆಸುತ್ತಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಉನ್ನತಾಧಿಕಾರಿಗಳಾದ ತಹಶೀಲ್ದಾರ್ ಶ್ರೀನಿವಾಸ್, ಉಪ ವಿಭಾಗಾಧಿಕಾರಿ (AC) ಜಂಬಗಿ ರೇಣುಕಾಪ್ರಸಾದ್ ದಿಲೀಪ್, ಮತ್ತು ಮೇಲ್ವಿಚಾರಕ ಮುನಿರಾಜು ಮತ್ತು ಬಿಎಲ್‌ಒಗಳಾದ ಮೊಹಮ್ಮದ್ ಆರೀಫ್ ಪಾಷಾ, ನಾಜಿಯಾ ಖಾನುಂ, ರೇಷ್ಮಾ ತಲಾತ್, ಪರ್‌ವೀನ್ ಉನ್ನೀಸಾ ಮತ್ತು ಉಮದಾ ಬಾನು ಇವರಲ್ಲರಿಗೂ ನೋಟಿಸ್ ನೀಡಲಾಗಿದೆ.
ಮೈಸೂರಿನಲ್ಲೂ ನಿಯಮ ಉಲ್ಲಂಘನೆ ಇದೇ ರೀತಿಯ ಲೋಪ ಮೈಸೂರು ಜಿಲ್ಲೆಯಲ್ಲೂ ವರದಿಯಾಗಿದೆ. ಮೈಸೂರಿನ ಎನ್.ಆರ್. (N.R.) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಎಲ್‌ಒಗಳು ಸಾರ್ವಜನಿಕ ಸ್ಥಳ ಹಾಗೂ ಮತಗಟ್ಟೆ ಕೇಂದ್ರಗಳಲ್ಲಿ ಸಾರ್ವಜನಿಕರನ್ನು ಗುಂಪುಗೂಡಿಸಿ ಸಾಮೂಹಿಕವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮನೆ ಮನೆಗೆ ತೆರಳಿ ಪಾರದರ್ಶಕವಾಗಿ ಪರಿಷ್ಕರಣೆ ನಡೆಸಬೇಕು ಎಂದು ಸ್ಥಳೀಯ ನಿವಾಸಿಗಳು ತೀವ್ರ ಒತ್ತಾಯ ಹೇರಿದ್ದಾರೆ.