Select Location
All Locations
State
Region
City / District
2018 ರಲ್ಲಿ ನಡೆದ ಗುಂಡಿನ ದಾಳಿ ಪ್ರಕರಣ:: BJP ಶಾಸಕನಿಗೆ 4 ವರ್ಷ ಜೈಲು ಶಿಕ್ಷೆ

2018 ರಲ್ಲಿ ನಡೆದ ಗುಂಡಿನ ದಾಳಿ ಪ್ರಕರಣ:: BJP ಶಾಸಕನಿಗೆ 4 ವರ್ಷ ಜೈಲು ಶಿಕ್ಷೆ

ನವದೆಹಲಿ: 2018ರಲ್ಲಿ ನಡೆದ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಮಹಿಳಾ ವೈದ್ಯರೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಹಾರದ ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್ ಅವರಿಗೆ ದೆಹಲಿಯ ನ್ಯಾಯಾಲಯವೊಂದು ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಶಿಕ್ಷೆಯಿಂದಾಗಿ ಅವರ ಬಿಹಾರ ವಿಧಾನಸಭಾ ಸದಸ್ಯತ್ವ ಕೈತಪ್ಪುವ ಭೀತಿ ಎದುರಾಗಿದೆ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ರಾಜು ಕುಮಾರ್ ಸಿಂಗ್ ಅವರನ್ನು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 304 ಭಾಗ II (ಕೊಲೆಗೆ ಸಮನಲ್ಲದ ಅಪರಾಧಯುತ ನರಹತ್ಯೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 30 ರ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿದೆ. ಐಪಿಸಿ ಅಡಿಯಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಯ ಜೊತೆಗೆ, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರತ್ಯೇಕವಾಗಿ ಎರಡು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಅಲ್ಲದೆ, ಸಂತ್ರಸ್ತೆಯ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯವು ಶಾಸಕರಿಗೆ ನಿರ್ದೇಶನ ನೀಡಿದೆ. ಒಂದು ವೇಳೆ ಈ ಮೊತ್ತವನ್ನು ಪಾವತಿಸಲು ವಿಫಲರಾದರೆ ಹೆಚ್ಚುವರಿಯಾಗಿ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

2018ರ ಡಿಸೆಂಬರ್ 31 ರಂದು ದೆಹಲಿಯ ವಸಂತ್ ಕುಂಜ್‌ನಲ್ಲಿರುವ ರಾಜು ಕುಮಾರ್ ಸಿಂಗ್ ಅವರ ಫಾರ್ಮ್‌ಹೌಸ್‌ನಲ್ಲಿ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಹರ್ಷೋದ್ಗಾರಕ್ಕಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಡಾ. ಅರ್ಚನಾ ಗುಪ್ತಾ ಎಂಬುವವರಿಗೆ ತೀವ್ರ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಈ ಸಂಬಂಧ ದೆಹಲಿ ಪೊಲೀಸರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ರಾಜು ಕುಮಾರ್ ಸಿಂಗ್ ಸದ್ಯ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಸಾಹೇಬ್‌ಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. 

2020 ರ ಬಿಹಾರ ಚುನಾವಣೆಯಲ್ಲಿ ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿ (VIP) ಟಿಕೆಟ್‌ನಿಂದ ಗೆದ್ದಿದ್ದ ಅವರು, ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಸದಸ್ಯತ್ವ ರದ್ದಾಗುವ ಭೀತಿ: ಜನಪ್ರತಿನಿಧಿಗಳ ಕಾಯ್ದೆ 1951 ರ ನಿಬಂಧನೆಗಳ ಪ್ರಕಾರ, ಯಾವುದೇ ಶಾಸಕ ಅಥವಾ ಸಂಸದರಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಯಾದರೆ ಅವರ ಸದಸ್ಯತ್ವ ತಕ್ಷಣವೇ ರದ್ದಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜು ಕುಮಾರ್ ಸಿಂಗ್ ಅವರ ಶಾಸಕ ಸ್ಥಾನ ಅಪಾಯದಲ್ಲಿದೆ. ಒಂದು ವೇಳೆ ಮೇಲ್ಮನವಿ ನ್ಯಾಯಾಲಯವು ಈ ಶಿಕ್ಷೆ ಅಥವಾ ಅಪರಾಧ ನಿರ್ಣಯಕ್ಕೆ ತಡೆಯಾಜ್ಞೆ ನೀಡದಿದ್ದರೆ, ಸಾಹೇಬ್‌ಗಂಜ್ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಲಿದೆ.


Udayavani 1 hour ago
Home Flash News