Select Location
All Locations
State
Region
City / District
ರಾಮ ಮಂದಿರದ ದೇಣಿಗೆ 'ಕಳ್ಳತನ'ದಿಂದ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆ: ಅಖಿಲೇಶ್

ರಾಮ ಮಂದಿರದ ದೇಣಿಗೆ 'ಕಳ್ಳತನ'ದಿಂದ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆ: ಅಖಿಲೇಶ್

ಲಕ್ನೋ: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತರು ಸಲ್ಲಿಸಿದ್ದ ದೇಣಿಗೆ ಹಣದಲ್ಲಿ ನಡೆದಿದೆ ಎನ್ನಲಾದ ಭಾರಿ ಅವ್ಯವಹಾರ ಮತ್ತು ದುರುಪಯೋಗದ ಘಟನೆಯು ಜಗತ್ತಿನಾದ್ಯಂತ ಇರುವ ಸನಾತನ ಧರ್ಮದ ಅನುಯಾಯಿಗಳನ್ನು ತೀವ್ರವಾಗಿ ಕೆರಳಿಸಿದೆ ಎಂದು ಸಮಾಜವಾದಿ ಪಕ್ಷದ (SP) ಅಧ್ಯಕ್ಷ ಅಖಿಲೇಶ್ ಯಾದವ್ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಗರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಗೆ ಮಸಿ ಬಳಿಯುವಂತಾಗಿದ್ದು, ಇದಕ್ಕೆ ಆಡಳಿತಾರೂಢ ಬಿಜೆಪಿ ಮತ್ತು ಅದರ ಸಹವರ್ತಿಗಳೇ ನೇರ ಹೊಣೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, "ಅಯೋಧ್ಯೆ ರಾಮ ಮಂದಿರದ ಕಾಣಿಕೆ, ದಕ್ಷಿಣೆ ಮತ್ತು ದೇಣಿಗೆ ಹಣ ಕಳ್ಳತನವಾಗಿರುವ ಸುದ್ದಿ ಈಗ ವಿಶ್ವದಾದ್ಯಂತ ಹರಡಿದೆ. ಇದರಿಂದಾಗಿ ವಿವಿಧ ದೇಶಗಳಲ್ಲಿ ವಾಸಿಸುತ್ತಿರುವ ಸನಾತನ ಧರ್ಮದ ಕೋಟ್ಯಂತರ ಭಕ್ತರು ತೀವ್ರವಾಗಿ ನೊಂದಿದ್ದಾರೆ ಮತ್ತು ತಲೆತಗ್ಗಿಸುವಂತಾಗಿದೆ. ತಮ್ಮ ಆರಾಧ್ಯ ದೇವರಿಗಾಗಿ ಶ್ರದ್ಧಾಭಕ್ತಿಯಿಂದ ಹಣ ಹಾಗೂ ದುಬಾರಿ ವಸ್ತುಗಳನ್ನು ಕಾಣಿಕೆಯಾಗಿ ನೀಡಿದ್ದ ಅನಿವಾಸಿ ಭಾರತೀಯರ ಭಾವನೆಗಳಿಗೆ ಬಿಜೆಪಿ ಮತ್ತು ಅದರ ಬೆಂಬಲಿಗರು ಭಾರಿ ಧಕ್ಕೆ ತಂದಿದ್ದಾರೆ," ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯ ಇಂತಹ ಧರ್ಮಬಾಹಿರ ಹಾಗೂ ಭ್ರಷ್ಟ ನಡಾವಳಿಗಳಿಂದಾಗಿ ದೇಶದ ಸಾಂಸ್ಕೃತಿಕ ಇತಿಹಾಸಕ್ಕೆ ಕಳಂಕ ಅಂಟಿಕೊಂಡಿದೆ ಎಂದಿದ್ದಾರೆ.

ಇದೇ ವೇಳೆ ಈ ವಿವಾದವು ದೇಶದ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ ಅವರು, "ವಿಶ್ವದಾದ್ಯಂತ ಇರುವ ಹೂಡಿಕೆದಾರರು ಈಗ ಭಾರತದಿಂದ ತಮ್ಮ ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ತಮ್ಮದೇ ಆರಾಧ್ಯ ದೇವರಿಗಾಗಿ ಬಂದ ದೇಣಿಗೆಯನ್ನು ರಕ್ಷಿಸಲು ಯೋಗ್ಯತೆ ಇಲ್ಲದ ಈ ಸರ್ಕಾರ, ನಾಳೆ ನಮ್ಮ ಹೂಡಿಕೆಯನ್ನು ಹೇಗೆ ತಾನೇ ರಕ್ಷಿಸಲು ಸಾಧ್ಯ? ಎಂಬ ಆತಂಕ ಹೂಡಿಕೆದಾರರಲ್ಲಿ ಮೂಡಿದೆ. ಈ ಮೂಲಕ ಬಿಜೆಪಿ ಸರ್ಕಾರವು ತನ್ನ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ," ಎಂದು ಕುಟುಕಿದ್ದಾರೆ. ಇದೇ ವೇಳೆ, ದೇವಸ್ಥಾನದ ಕಾಣಿಕೆ ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ರಾಮಶಂಕರ್ ಅಲಿಯಾಸ್ ಟಿನ್ನು ಯಾದವ್ ಜೊತೆ ಅಖಿಲೇಶ್ ಯಾದವ್ ಅವರಿಗೆ ನಿಕಟ ಸಂಬಂಧವಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಾಡಿದ್ದ ಆರೋಪವನ್ನು ಅಖಿಲೇಶ್ ತಿರಸ್ಕರಿಸಿದ್ದಾರೆ. ಇದು ಸತ್ಯಕ್ಕೆ ದೂರವಾದ ಆರೋಪವಾಗಿದ್ದು, ಸ್ವಂತ ಪಕ್ಷದ ನಾಯಕರೇ ಹತ್ತಿರ ಸೇರಿಸದಂತಹ, ಸಮಾಜದಲ್ಲಿ ಅತ್ಯಂತ ಭ್ರಷ್ಟ ಮತ್ತು ಸಾರ್ವಜನಿಕವಾಗಿ ಅಪಕೀರ್ತಿ ಹೊಂದಿರುವ ವ್ಯಕ್ತಿಗಳ ಮೂಲಕ ಬಿಜೆಪಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿಸುತ್ತಿದೆ. ಅಂತಹ ವ್ಯಕ್ತಿಗಳಿಗೆ ಸ್ವಂತ ಧ್ವನಿಯಾಗಲಿ ಅಥವಾ ಸ್ವಂತ ಆಲೋಚನೆಯಾಗಲಿ ಇರುವುದಿಲ್ಲ, ಅವರು ಕೇವಲ ಸುಳ್ಳು ಹರಡುವ ಬೇರೆಯವರ ಕೈಗೊಂಬೆಗಳಷ್ಟೇ ಎಂದು ತಿರುಗೇಟು ನೀಡಿದ್ದಾರೆ.


Udayavani 1 hour ago
Home Flash News