Select Location
All Locations
State
Region
City / District
ಜೆನ್‌–ಝೀಗಳನ್ನು ತಲುಪಲು ಜಾಲತಾಣ ಸಕ್ರಿಯವಾಗಿ ಬಳಸಿ: ಸಂಸದರಿಗೆ ಮೋದಿ ಕಿವಿಮಾತು

ಜೆನ್‌–ಝೀಗಳನ್ನು ತಲುಪಲು ಜಾಲತಾಣ ಸಕ್ರಿಯವಾಗಿ ಬಳಸಿ: ಸಂಸದರಿಗೆ ಮೋದಿ ಕಿವಿಮಾತು

ನವದೆಹಲಿ: ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವ ಮೂಲಕ ಜೆನ್‌–ಝೀ ತಲೆಮಾರಿನ ಯುವಜನರನ್ನು ತಲುಪಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಸಂಸದರಿಗೆ ಕಿವಿಮಾತು ಹೇಳಿದ್ದಾರೆ.

ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಹಾಗೂ ಶಿವಸೇನೆಯ (ಉದ್ಧವ್ ಬಣ) ಆರು ಹೊಸ ಸಂಸದರು ಸೇರಿದಂತೆ 40ಕ್ಕೂ ಹೆಚ್ಚು ಎನ್‌ಡಿಎ ಸಂಸದರೊಂದಿಗೆ ಶುಕ್ರವಾರ(ಆ.7) ಪ್ರಧಾನಿ ಮೋದಿ ಅವರು ಸಭೆ ನಡೆಸಿದ್ದಾರೆ. ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು, ಜೆನ್‌–ಝೀ ಮತದಾರರನ್ನು ತಲುಪುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವಂತೆ ಸಂಸದರಿಗೆ ಮೋದಿ ಅವರು ಸಲಹೆ ನೀಡಿದ್ದಾರೆ. ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಸಾಮಾಜಿಕ ಜಾಲತಾಣ ಎಂಬುದು ಮತದಾರರನ್ನು ತಲುಪಲು ಈಗ ಹೊಸ ವೇದಿಕೆಯಾಗಿದೆ. ಕೆಲವು ಸಂಸದರು ಇದನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇನ್ನಷ್ಟು ಸಕ್ರಿಯವಾಗಬೇಕಿದೆ’ ಎಂದರು.

ಸಂಸದರು ತಮ್ಮ ಕ್ಷೇತ್ರಗಳಲ್ಲಿ ಕ್ರೀಡೆಗಳನ್ನು ಉತ್ತೇಜಿಸುವ ಕಡೆ ಹೆಚ್ಚಿನ ಗಮನ ಹರಿಸಬೇಕು, ಕ್ರೀಡಾ ಯೋಜನೆ ಮತ್ತು ಅನುದಾನಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ವಿನಂತಿಸಿದರು. ಸಂಸತ್ತಿನಲ್ಲಿ ವಿರೋಧ ಪಕ್ಷಗಳನ್ನು ಎದುರಿಸುವಾಗ ಅಥವಾ ಅವರೊಂದಿಗೆ ವ್ಯವಹರಿಸುವಾಗ ಯಾವುದೇ ಕಾರಣಕ್ಕೂ ಕೆಟ್ಟ ಅಥವಾ ಅಸಂಸದೀಯ ಪದಗಳನ್ನು ಬಳಸಬಾರದು ಎಂದು ಪ್ರಧಾನಿ ಮೋದಿ ಅವರು ಯುವ ಸಂಸದರಿಗೆ ಸೂಚಿಸಿದ್ದಾರೆ. ಯುವ ಸಂಸದರು ಸಂಸತ್ತಿನ ಕಾರ್ಯವಿಧಾನಗಳನ್ನು ಸರಿಯಾಗಿ ಕಲಿತುಕೊಳ್ಳಿ. ಅಗತ್ಯವಿದ್ದಾಗ ಸಂಸತ್ತಿನ ಗ್ರಂಥಾಲಯಕ್ಕೆ ಭೇಟಿ ನೀಡಿ ಎಂದು ಹೇಳಿದ್ದಾರೆ. ಪ್ರತಿಯೊಬ್ಬ ಸಂಸದರಿಗೂ 'ರಿಪೋರ್ಟ್ ಕಾರ್ಡ್' ನೀಡಲಾಗಿದೆ. ಅದರಲ್ಲಿ ಅವರ ಸಾಮಾಜಿಕ ಜಾಲತಾಣಗಳ ಖಾತೆಗಳ ನಿರ್ದಿಷ್ಟ ವಿವರಗಳನ್ನೊಳಗೊಂಡ ಲಕೋಟೆಯನ್ನು ನೀಡಲಾಗಿದ್ದು, ಸುಧಾರಣೆ ಕಾಣಬೇಕಾದ ವಿಷಯಗಳನ್ನು ಕೆಂಪು ಬಣ್ಣದಲ್ಲಿ ನಮೂದಿಸಲಾಗಿತ್ತು ಎಂದು ಮೂಲಗಳು ಹೇಳಿವೆ.


Prajavani 1 day ago
Home Flash News