Select Location
All Locations
State
Region
City / District
ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ: ಮುಂದುವರೆದ ಕಗ್ಗಂಟು

ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ: ಮುಂದುವರೆದ ಕಗ್ಗಂಟು

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಿ ಐದು ದಿನಗಳು ಕಳೆದರೂ ನೂತನ ಸಚಿವರಿಗೆ ಇನ್ನೂ ಖಾತೆಗಳ ಹಂಚಿಕೆ ಮಾಡಿಲ್ಲ.

ಹಲವು ಸಚಿವರು ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿರುವುದು ಮತ್ತು ಇನ್ನು ಕೆಲವರು ತಮಗೆ ಸೂಚಿಸಿದ ಖಾತೆಗಳು ಬೇಡ ಎಂದು ಹೇಳಿರುವುದರಿಂದ ಖಾತೆ ಹಂಚಿಕೆ ಕಗ್ಗಂಟಾಗಿದೆ. ಅಲ್ಲದೇ, ಮಹಿಳಾ ಕೋಟಾದಡಿ ಒಂದು ಸ್ಥಾನ ಕೂಡ ತುಂಬಬೇಕಾಗಿದೆ. ಸಂಪುಟ ವಿಸ್ತರಣೆಯಿಂದ ಉದ್ಭವಿಸಿರುವ ಪರಿಸ್ಥಿತಿ ಇನ್ನೂ ತಣಿದಿಲ್ಲ. ಅದರ ಮಧ್ಯೆ ಖಾತೆ ಹಂಚಿಕೆ ಅಸಮಾಧಾನದ ಕಿಚ್ಚು ಹೊತ್ತಿದರೆ ಪರಿಸ್ಥಿತಿ ಕಷ್ಟವಾಗಬಹುದು ಎಂಬ ಕಾರಣಕ್ಕೆ ಮುಖ್ಯಮಂತ್ರಿಯವರು ಖಾತೆ ಹಂಚಿಕೆ ತಡೆ ಹಿಡಿದಿದ್ದಾರೆ ಎಂದು ಮೂಲಗಳು ಹೇಳಿವೆ. ಶಿವಕುಮಾರ್ ಅವರು ಕೆಲವು ಹಿರಿಯ ಸಚಿವರನ್ನು ಕರೆದು ಈ ಹಿಂದೆ ನಿರ್ವಹಿಸಿದ್ದ ಖಾತೆಗಳನ್ನೇ ನಿರ್ವಹಿಸುವಂತೆ ಸಲಹೆ ನೀಡಿದ್ದರು. ಆದರೆ, ಕೆಲವು ಸಚಿವರು ತಾವು ಹಿಂದೆ ನಿರ್ವಹಿಸಿದ್ದ ಮಹತ್ವವಲ್ಲದ ಖಾತೆಗಳನ್ನು ಈ ಬಾರಿ ನಿರ್ವಹಿಸಲು ಸಾಧ್ಯವಿಲ್ಲ, ಪ್ರಮುಖ ಖಾತೆಗಳನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊದಲ ಬಾರಿ ಸಚಿವರಾದವರಲ್ಲಿ ಕೆಲವರಿಗೆ ಪ್ರಮುಖ ಖಾತೆಗಳನ್ನೂ, ಇನ್ನು ಕೆಲವರಿಗೆ ನಿಗಮ–ಮಂಡಳಿಯಷ್ಟು ಕಿಮ್ಮತ್ತಿಲ್ಲದ ಸಣ್ಣ ಪುಟ್ಟ ಖಾತೆಗಳನ್ನು ಸೂಚಿಸಿರುವುದೂ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ, ಖಾತೆಯ ಹಂಚಿಕೆಯ ಸಂಭನೀಯ ಪಟ್ಟಿಯಲ್ಲಿ ಕೆಲವು ಬದಲಾವಣೆ ಆಗಬಹುದು. ಮೊದಲ ಕಂತಿನ ವಿಸ್ತರಣೆ ಆದಾಗ ಸಚಿವ ಕೃಷ್ಣ ಬೈರೇಗೌಡ ಮತ್ತು ರಾಮಲಿಂಗಾರೆಡ್ಡಿ ಅವರು ತಮ್ಮ ಖಾತೆ ಬದಲಿಸುವಂತೆ ಪಟ್ಟು ಹಿಡಿದಿದ್ದರು. ಕೃಷ್ಣ ಅವರನ್ನು ಶಿವಕುಮಾರ್ ಮನವೊಲಿಸಿದ್ದರು. ಆದರೆ, ಜಲಸಂಪನ್ಮೂಲ ಖಾತೆ ಬಿಟ್ಟು ಬೇರೆ ಖಾತೆಯನ್ನು ನೀಡುವಂತೆ ರಾಮಲಿಂಗಾರೆಡ್ಡಿ ತಮ್ಮ ಬೇಡಿಕೆಯನ್ನು ಮುಂದುವರೆಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಾದ ಮಾರನೇ ದಿನವೇ ಎಲ್ಲ ಸಚಿವರಿಗೂ ಜಿಲ್ಲೆಗಳನ್ನು ಹಂಚಿಕೆ ಮಾಡಿ, ಬರ ಮತ್ತು ಅತಿವೃಷ್ಟಿಯ ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚಿಸಿದರು. ಆ ಮೂಲಕ ಜಿಲ್ಲೆಗಳಿಗೆ ಸಚಿವರನ್ನು ಸಾಗಹಾಕುವ ಮೂಲಕ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.


Prajavani 1 hour ago
Home Flash News