BMTC: 300 ಬಿಎಂಟಿಸಿ ಬಸ್‌ಗಳಲ್ಲಿ ಶೀಘ್ರ ಆಡಿಯೋ ಜಾಹೀರಾತು
ಬೆಂಗಳೂರು: ಇನ್ನು ಬಿಎಂಟಿಸಿ ಬಸ್ ಹತ್ತಿದರೆ 'ಮುಂದಿನ ನಿಲ್ದಾಣ'ದ ಮಾಹಿತಿ ಜತೆಗೆ ಜಾಹೀರಾತಿನ ಧ್ವನಿ ಕೂಡ ಕಿವಿಗೆ ಬೀಳಲಿದೆ. ಸಾರಿಗೇತರ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬಿಎಂಟಿಸಿ ನಗರದ 300 ನಾನ್-ಎಸಿ ಬಸ್‌ಗಳಲ್ಲಿ ಆಡಿಯೋ ಜಾಹೀರಾತು ವ್ಯವಸ್ಥೆ ಅಳವಡಿಸಲು ಮುಂದಾಗಿದೆ. ನಗರದೊಳಗೆ ಸಂಚರಿಸುವ ಸಾಮಾನ್ಯ, ಎಕ್ಸ್‌ಪ್ರೆಸ್ ಹಾಗೂ ರಾತ್ರಿ ಸೇವೆಯ ಬಸ್‌ಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದ್ದು, ವ್ಯವಸ್ಥೆ ಅಳವಡಿಕೆ, ನಿರ್ವಹಣೆ ಹಾಗೂ ನಿರ್ವಹಣಾ ಹಕ್ಕಿಗಾಗಿ 3 ವರ್ಷಗಳ ಗುತ್ತಿಗೆ ನೀಡಲು ಟೆಂಡರ್ ಆಹ್ವಾನಿಸಲಾಗಿದೆ. ಅಗತ್ಯವಿದ್ದರೆ ಗುತ್ತಿಗೆಯನ್ನು ಇನ್ನೂ 3 ವರ್ಷ ವಿಸ್ತರಿಸುವ ಅವಕಾಶವಿದೆ.
10 ಸೆಕೆಂಡ್ ಮಿತಿ: ಪ್ರತಿ ವಾಣಿಜ್ಯ ಜಾಹೀರಾತಿನ ಅವಧಿ ಗರಿಷ್ಠ 10 ಸೆಕೆಂಡ್ ಇರಲಿದೆ. ಕನ್ನಡ ಜಾಹೀರಾತು ಕಡ್ಡಾಯವಾಗಿದ್ದು, ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಗಳನ್ನು ಐಚ್ಛಿಕವಾಗಿ ಪ್ರಸಾರ ಮಾಡಬಹುದು. ಜಾಹೀರಾತು ಪ್ರಸಾರಕ್ಕೂ ಮುನ್ನ ಬಿಎಂಟಿಸಿಯ ಲಿಖೀತ ಅನುಮೋದನೆ ಪಡೆಯುವುದು ಕಡ್ಡಾಯ. ಅಶ್ಲೀಲ, ಆಕ್ಷೇಪಾರ್ಹ, ರಾಜಕೀಯ ಪಕ್ಷಪಾತದ ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಹ ವಿಷಯಗಳಿಗೆ ಅವಕಾಶವಿಲ್ಲ. 2025-26ರಲ್ಲಿ ಸಂಸ್ಥೆಯ ಸಂಚಾರ ಆದಾಯ 2,677 ಕೋಟಿ ರೂ.ಗೆ ಏರಿದ್ದರೂ, ಸಾರಿಗೇತರ ಆದಾಯ 729 ಕೋಟಿಯಿಂದ 708 ಕೋಟಿ ರೂ.ಗೆ ಇಳಿಕೆಯಾಗಿದೆ. ಹೀಗಾಗಿ ಆಡಿಯೋ ಜಾಹೀರಾತು ಮೂಲಕ ಹೊಸ ಆದಾಯ ಮೂಲ ಸೃಷ್ಟಿಸುವ ನಿರೀಕ್ಷೆಯಿದೆ. ಆಡಿಯೋ ಜಾಹೀರಾತು ವ್ಯವಸ್ಥೆ ಅಳವಡಿಕೆ, ನಿರ್ವಹಣೆಗೆ ಸಂಬಂಧಿಸಿದ ಟೆಂಡರ್ ಸಲ್ಲಿಕೆಗೆ ಆ.31 ಕೊನೆಯ ದಿನವಾಗಿದ್ದು, ಸೆ.2ರಂದು ತಾಂತ್ರಿಕ ಬಿಡ್ ತೆರೆಯಲಾಗುತ್ತದೆ. ಪ್ರತಿ ಬಸ್‌ನಲ್ಲಿ ಕನಿಷ್ಠ 2 ಸ್ಪೀಕರ್ ಅಳವಡಿಸಬೇಕಿದ್ದು, ಬಸ್‌ನ ಮೂಲ ರಚನೆಗೆ ಹಾನಿಯಾಗದಂತೆ ವ್ಯವಸ್ಥೆ ಅಳವಡಿಸುವುದು ಕಡ್ಡಾಯವಾಗಿದೆ.