'ಶಾಂತಿ ಕ್ರಾಂತಿ' ರೀ ರಿಲೀಸ್: ಸದ್ಯಕ್ಕಂತೂ ಸಾಧ್ಯವಿಲ್ಲ ಎಂದ ಕ್ರೇಜಿಸ್ಟಾರ್ ಸಹೋದರ
ಬೆಂಗಳೂರು: ಕಳೆದ ಕೆಲ ದಿನಗಳಿಂದ ಚಂದನವನದಲ್ಲಿ 'ಶಾಂತಿ ಕ್ರಾಂತಿ' ಸಿನಿಮಾದ ಮರು ಬಿಡುಗಡೆ ಬಗ್ಗೆ ದೊಡ್ಡದಾಗಿ ಟಾಕ್ ಹರಿದಾಡುತ್ತಿದೆ. 1991ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದಲ್ಲಿ ಕನ್ನಡ ಸೇರಿ ನಾಲ್ಕು ಭಾಷೆಗಳಲ್ಲಿ ಬಂದಿದ್ದ ಮಲ್ಟಿಸ್ಟಾರ್ಸ್ ಚಿತ್ರ 'ಶಾಂತಿ ಕ್ರಾಂತಿ'. ಸುಮಾರು 10 ಕೋಟಿ ರೂ. ಬಜೆಟ್ ನಲ್ಲಿ ಬಂದಿದ್ದ ಈ ಚಿತ್ರ, ಬಾಕ್ಸಾಫೀಸಿನಲ್ಲಿ ಹೀನಾಯ ಸೋಲು ಕಂಡಿತು. ಕೇವಲ 8 ಕೋಟಿ ಗಳಿಕೆ ಕಂಡಿತು. ಚಿತ್ರ ಸೋತರೂ 'ಶಾಂತಿ ಕ್ರಾಂತಿ' ಇಂದಿಗೂ ಚಿತ್ರರಂಗದಲ್ಲೊಂದು ವಿಭಿನ್ನ ಪ್ರಯತ್ನ. ಅದು ಕೂಡ ಕನ್ನಡ ಚಿತ್ರರಂಗಕ್ಕೆ ಆ ಕಾಲದಲ್ಲಿ ಬಂದಿದ್ದ ಹೆಮ್ಮೆ ಎಂದರೆ ತಪ್ಪಾಗದು.
ಇತ್ತೀಚೆಗೆ ಚಂದನವನದಲ್ಲಿ 'ಶಾಂತಿ ಕ್ರಾಂತಿ' ಮರು ಬಿಡುಗಡೆ ಆಗುತ್ತದೆ ಎನ್ನುವ ಬಗ್ಗೆ ದೊಡ್ಡದಾಗಿ ಟಾಕ್ ಹರಿದಾಡಿದೆ. ಇನ್ನೇನೋ ರಿಲೀಸ್ ಆಗಿಯೇ ಬಿಡುತ್ತದೆ ಎನ್ನುವ ಮಟ್ಟಿಗೆ ಗಾಂಧಿನಗರದಲ್ಲಿ ಸುದ್ದಿ ಹರಿದಾಡಿದೆ. ಈ ವಿಚಾರದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಹೋದರ ಬಾಲಾಜಿ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಬಾಲಾಜಿ ವಿಡಿಯೋದಲ್ಲಿ ಹೇಳಿದ್ದೇನು?: ನೀವೆಲ್ಲ 'ಶಾಂತಿ ಕ್ರಾಂತಿ'ಗಾಗಿ, ನಮ್ಮಣ್ಣನಿಗಾಗಿ ತೋರಿಸಿರುವ ಪ್ರೀತಿ ಅಪಾರವಾಗಿರುವುದು. ಅದಕ್ಕೆ ನಾವೆಲ್ಲರೂ ಚಿರಖಣಿ ಆಗಿರುತ್ತೇವೆ. ನಿಮ್ಮ ಪ್ರೀತಿ ಶುರುವಾಗುವ ಎರಡ್ಮೂರು ದಿನಗಳ ಮುನ್ನವೇ ನಾನು ನಮ್ಮಣ್ಣ 'ಶಾಂತಿ ಕ್ರಾಂತಿ' ರೀ ರಿಲೀಸ್ ಬಗ್ಗೆ ಚರ್ಚೆ ಮಾಡಿದ್ದೆವು. ಆವತ್ತಿನಿಂದಲೇ ನಮ್ಮ ಪ್ರಯತ್ನ ಶುರುವಾಗಿದೆ ಎಂದಿದ್ದಾರೆ.
ಶಾಂತಿ ಕ್ರಾಂತಿ ನೆಗೆಟಿವ್ ಮೆಲ್ಟ್ ಆಗಿ ಹೋಗಿದೆ. ಹಾಗಾಗಿ ಅದನ್ನು ಇವತ್ತಿನ ತಂತ್ರಜ್ಞಾನಕ್ಕೆ ತಂದು ಮಾಡುವುದು ತುಂಬಾ ಕಷ್ಟ. ನಾವು ತುಂಬಾ ಸೋರ್ಸ್ (ಮೂಲಗಳನ್ನು) ಹುಡುಕುತ್ತಾ ಇದ್ದೇವೆ. ಒಂದು ವೇಳೆ ಅದು ಯಶಸ್ಸುಗೊಂಡರೆ ಖಂಡಿತವಾಗಿ ನಿಮ್ಮೆಲ್ಲರ ಮುಂದೆ ಅದನ್ನು ತರುವ ಆಸೆ ನಮಗಿದೆ ಎಂದಿದ್ದಾರೆ. ಒಂದು ವೇಳೆ ನಾಳೆ ನಾನು ಸಿನಿಮಾದ ಕೆಲಸ ಶುರು ಮಾಡಿದರೆ ಅದು ಪೂರ್ಣಗೊಳ್ಳಲು ಆರು ತಿಂಗಳು ಅಥವಾ ಒಂದು ವರ್ಷನೂ ಆಗಬಹುದು. ಯಾಕೆಂದರೆ ಮತ್ತೆ ನಾವು ಕಲರಿಂಗ್ ಮಾಡಿಸಬೇಕು. ಮ್ಯೂಸಿಕ್ ಮಾಡಿಸಬೇಕು. ರೀ ರೆಕಾರ್ಡ್ಸ್ ಮಾಡಿಸಬೇಕು. ಎಫೆಕ್ಟ್ಸ್ ಹಾಕಿಸಬೇಕು. ಡಿಐ ಮಾಡಿಸಬೇಕು. ರೀ ಸೆನ್ಸಾರ್ ಮಾಡಿಸಬೇಕು. ಈ ತರದ ತುಂಬಾ ವಿಚಾರಗಳಿವೆ.
ಅದನ್ನು ಆವತ್ತೇ ನಮ್ಮಣ್ಣ ಅದ್ಭುತವಾದ ಕಾಲ್ವಿಟಿಯಲ್ಲಿ ಕೊಟ್ಟಿದ್ದರು. ಇದನ್ನು ಇವತ್ತು ನಿಮ್ಮ ಇಷ್ಟದಂತೆ ಮಾಡಲು ಅದು ಅಷ್ಟೇ ಚೆನ್ನಾಗಿರಬೇಕು. ಇವತ್ತಿನ ಕಾಲಕ್ಕೆ ಖುಷಿ ಕೊಡುವ ಸೌಂಡ್ ಸಿಗಬೇಕು. ಡಾಲ್ಬಿ ಮಾಡಿಸಬೇಕು. ಡಿಟಿಎಸ್ ಮಾಡಿಸಬೇಕು.. ಹೀಗೆ ಇಷ್ಟು ವಿಷಯಗಳಿವೆ ಎಂದಿದ್ದಾರೆ. ತುಂಬಾ ಜನ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಸಿನಿಮಾ ರಿಲೀಸ್ ಮಾಡುತ್ತಾರೆ ಎನ್ನುತ್ತಿದ್ದಾರೆ. ಆದರೆ ಸುಳ್ಳು. ಸದ್ಯಕ್ಕಂತೂ ನಮ್ಕ ಕೈಯಲ್ಲಿ ಮಾಡೋಕೆ ಆಗಲ್ಲ. ಸೋರ್ಸ್ ಹುಡುಕುತ್ತಿದ್ದೇವೆ. ಅದು ಆದ್ರೆ ನಿಮಗೆಲ್ಲ ಹೇಳಿಯೇ ಅದಕ್ಕೆ ಓಂಕಾರ ಹಾಕುತ್ತೇವೆ ಎಂದಿದ್ದಾರೆ. ಆ ಮೂಲಕ ಹರಿದಾಡುತ್ತಿದ್ದ ಎಲ್ಲಾ ಗೊಂದಲಕ್ಕೂ ಬಾಲಾಜಿ ಅವರು ಇತಿಶ್ರೀ ಇಟ್ಟಿದ್ದಾರೆ.