ರಾಜ್ಯಪಾಲರ ಭಾಷಣದ ಸಂಪ್ರದಾಯ ನಿಲ್ಲಿಸಬೇಕು: ಎಂ.ಕೆ. ಸ್ಟಾಲಿನ್
ಚೆನ್ನೈ: ‘ರಾಜ್ಯಪಾಲರ ಭಾಷಣದ ಮೂಲಕ ಮೊದಲ ಅಧಿವೇಶನ ನಡೆಸುವ ಸಂಪ್ರದಾಯವನ್ನೇ ಕೈ ಬಿಡಬೇಕು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸದನದಲ್ಲಿ ಭಾಷಣ ಮಾಡದೇ, ಹೊರನಡೆದ ಬೆನ್ನಲ್ಲೇ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ‘ಮೊದಲು ತಮಿಳುನಾಡು, ನಂತರ ಕೇರಳ, ಈಗ ಕರ್ನಾಟಕ. ಮಾದರಿಯೂ ಸ್ಪಷ್ಟ ಹಾಗೂ ಉದ್ದೇಶಪೂರ್ವಕವಾಗಿದೆ. ಸರ್ಕಾರವು ಸಿದ್ಧಪಡಿಸಿಕೊಟ್ಟ ಭಾಷಣವನ್ನು ರಾಜ್ಯಪಾಲರು ಓದಲು ನಿರಾಕರಿಸುವ ಪಕ್ಷದ ಏಜೆಂಟರಂತೆ ವರ್ತಿಸಿದ್ದಾರೆ. ಆ ಮೂಲಕ ಜನರಿಂದ ಆಯ್ಕೆಯಾದ ಸರ್ಕಾರವನ್ನೇ ದುರ್ಬಲಗೊಳಿಸುವ ಯತ್ನಕ್ಕೆ ಕೈ ಹಾಕಿದ್ದಾರೆ’ ಎಂದು ತಿಳಿಸಿದ್ದಾರೆ