ಇದು ವಿಕಸಿತ ಕೇರಳಕ್ಕೆ ಸಮಯ: ಎಲ್ ಡಿಎಫ್-ಯುಡಿಎಫ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೇರಳದ ರಾಜಧಾನಿ ತಿರುವನಂತಪುರಂ ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ, ಬೃಹತ್ ರೋಡ್ ಶೋ ನಡೆಸಿ, ಬಿಜೆಪಿ ರ‍್ಯಾಲಿಯಲ್ಲಿ ಭಾಗಿಯಾಗಿ ವಿವಿಧ ರಂಗದ ನಾಯಕರನ್ನು ಭೇಟಿಯಾದರು. ಬಿಜೆಪಿ ಬೃಹತ್ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ''ಕೇರಳದಲ್ಲಿ ಅವಕಾಶ ನೀಡಿದರೆ ರಾಜ್ಯವನ್ನು ಲೂಟಿ ಮಾಡಿದ ವಂಚಕರಿಂದ ಎನ್‌ಡಿಎ ಪ್ರತಿ ಪೈಸೆಯನ್ನೂ ವಸೂಲಿ ಮಾಡುತ್ತದೆ'' ಎಂದರು ಎಲ್‌ಡಿಎಫ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಎರಡೂ ಅಧಿಕಾರಾವಧಿಗಳು ಭ್ರಷ್ಟಾಚಾರದಿಂದ ಕೂಡಿದ್ದವು. ಷ್ಟಾಚಾರವು ಕೇರಳದ ಬಡವರು ಮತ್ತು ಮಧ್ಯಮ ವರ್ಗದ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಲೂಟಿ ಮಾಡಲು ಕಾರಣವಾಗಿದೆ ಎಂದು ಪ್ರಧಾನಿ ಕಿಡಿ ಕಾರಿದರು.
ಶಬರಿಮಲೆ ದೇವಸ್ಥಾನದ ಚಿನ್ನ ಕಳ್ಳತನವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ ''ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಅವಕಾಶ ನೀಡಿದರೆ, ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ ಮತ್ತು ಎಲ್ಲಾ ಅಪರಾಧಿಗಳನ್ನು ಜೈಲಿಗೆ ಕಳುಹಿಸುತ್ತೇವೆ'' ಎಂದು ಪ್ರತಿಜ್ಞೆ ಮಾಡಿದರು. ತಮ್ಮ ಭಾಷಣದ ಕೊನೆಯಲ್ಲಿ ಅಪರೂಪಕ್ಕೆನೆಂಬಂತೆ ಇಂಗ್ಲಿಷ್ ಬಳಸಿ "ಈಗ ವಿಕಸಿತ ಕೇರಳದ ಸಮಯ. ಈಗ ಎನ್‌ಡಿಎ ಸರ್ಕಾರದ ಸಮಯ" ಎಂದರು. ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಿರುವನಂತಪುರಂ ಕಾರ್ಪೊರೇಷನ್ ನಲ್ಲಿ ಬಿಜೆಪಿ ಭಾರಿ ಗೆಲುವಿನ ನಂತರ ಪ್ರಧಾನಿ ಮೋದಿ ಅವರು ಕೇರಳಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.ತಿರುವನಂತಪುರಂ ಮೇಯರ್ ಆಗಿ ಆಯ್ಕೆಯಾದ ವಿ.ವಿ. ರಾಜೇಶ್ ಅವರನ್ನು ವೈಯಕ್ತಿಕವಾಗಿ ಅಭಿನಂದಿಸಿದರು.