ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು: ಪುರುಷ ಜನನಾಂಗ ಪ್ರವೇಶವಾಗದೆ ವೀರ್ಯ ವಿಸರ್ಜನೆಯಾದ್ರೆ ಅದು ಅ*ತ್ಯಾಚಾರವಲ್ಲ!
Chhattisgarh High Court ಮಹತ್ವದ ತೀರ್ಪೊಂದರಲ್ಲಿ, ಯೋನಿಯೊಳಗೆ ಪುರುಷ ಜನನಾಂಗವನ್ನು ನುಗ್ಗಿಸದೇ ಮೇಲಿನಿಂದ ಉಜ್ಜುವುದು ‘ಅತ್ಯಾಚಾರ’ ಅಲ್ಲ, ಅದು ‘ಅತ್ಯಾಚಾರಕ್ಕೆ ಯತ್ನ’ ಎಂದು ಸ್ಪಷ್ಟಪಡಿಸಿದೆ. ನ್ಯಾಯಾಲಯದ ಪ್ರಕಾರ, ಅತ್ಯಾಚಾರ ಸಾಬೀತಾಗಲು ಪ್ರವೇಶ (penetration) ನಡೆದಿರುವುದು ಅಗತ್ಯ. ಈ ಪ್ರಕರಣದಲ್ಲಿ ಅಂತಹ ಯಾವುದೇ ವೈದ್ಯಕೀಯ ಸಾಕ್ಷ್ಯ ದೊರಕದ ಹಿನ್ನೆಲೆ, ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.
ನ್ಯಾಯಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ಅವರು, ಆರೋಪಿಯ ಉದ್ದೇಶ ಸ್ಪಷ್ಟವಾಗಿದ್ದರೂ ಯೋನಿಯೊಳಗೆ ಜನನಾಂಗ ಪ್ರವೇಶಿಸಿದ ಬಗ್ಗೆ ಯಾವುದೇ ದೃಢವಾದ ಸಾಕ್ಷ್ಯ ಇಲ್ಲವೆಂದು ಗಮನಿಸಿದರು. ಸಂತ್ರಸ್ತೆಯ ವೈದ್ಯಕೀಯ ವರದಿಯಲ್ಲಿಯೂ ಪ್ರವೇಶ ಅಥವಾ ಗಾಯಗಳ ಪುರಾವೆ ಕಂಡುಬಂದಿಲ್ಲ. ಆದ್ದರಿಂದ ಇದು ಅತ್ಯಾಚಾರವಲ್ಲ, ಆದರೆ ಅತ್ಯಾಚಾರಕ್ಕೆ ಯತ್ನವೆಂದು ನ್ಯಾಯಾಲಯ ತೀರ್ಮಾನಿಸಿದೆ.
2004ರ ಮೇ 21ರಂದು ನಡೆದ ಘಟನೆಯಲ್ಲಿ, ಆರೋಪಿಯು ಸಂತ್ರಸ್ತೆಯನ್ನು ತನ್ನ ಮನೆಗೆ ಎಳೆದುಕೊಂಡು ಹೋಗಿ ಅವಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದಾನೆ ಎಂಬ ಆರೋಪವಿತ್ತು. ವಿಚಾರಣಾ ನ್ಯಾಯಾಲಯವು ಮೊದಲು ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಆದರೆ ಹೈಕೋರ್ಟ್ ನಂತರ ಅತ್ಯಾಚಾರ ಆರೋಪವನ್ನು ರದ್ದುಪಡಿಸಿ, ಅತ್ಯಾಚಾರಕ್ಕೆ ಯತ್ನ ಮಾಡಿದ ಅಪರಾಧಕ್ಕೆ ಶಿಕ್ಷೆಯನ್ನು ಮೂರು ವರ್ಷ ಆರು ತಿಂಗಳಿಗೆ ಕಡಿತಗೊಳಿಸಿ, ₹200 ದಂಡ ವಿಧಿಸಿ, ಉಳಿದ ಶಿಕ್ಷೆ ಅನುಭವಿಸಲು ಆರೋಪಿಗೆ ಎರಡು ತಿಂಗಳೊಳಗೆ ಶರಣಾಗುವಂತೆ ಆದೇಶಿಸಿದೆ.