T20 World Cup: ಒಂದೇ ಇನ್ನಿಂಗ್ಸ್‌ನಲ್ಲಿ ಗೇಲ್, ವಿರಾಟ್ ದಾಖಲೆ ಮುರಿದ ಫಿನ್ ಅಲೆನ್
ಕೋಲ್ಕತ್ತಾ: ಐಸಿಸಿ ಟಿ20 ವಿಶ್ವಕಪ್ 2026ರ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಅಟ್ಟಾಡಿಸಿ ಹೊಡೆದ ನ್ಯೂಜಿಲ್ಯಾಂಡ್ ಫೈನಲ್ ಪ್ರವೇಶಿಸಿದೆ. ಫಿನ್ ಅಲೆನ್ (Finn Allen) ಆರ್ಭಟಕ್ಕೆ ಹರಿಣಗಳು ಸುಸ್ತಾದರು.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನಲ್ಲಿ ಫಿನ್ ಅಲೆನ್ ತನ್ನ ವಿಶ್ವರೂಪ ತೋರಿಸಿದರು. ಕೇವಲ 33 ಎಸೆತ ಎದುರಿಸಿದ ಕಿವೀಸ್ ಆರಂಭಿಕ ಆಟಗಾರ ಭರ್ಜರಿ ಶತಕ ಬಾರಿಸಿದರು. ಈ ಮೂಲಕ ಟಿ20 ವಿಶ್ವಕಪ್ ನ ಅತಿ ವೇಗದ ಶತಕ ಬಾರಿಸಿದ ದಾಖಲೆ ನಿರ್ಮಿಸಿದರು.
ಅಲೆನ್ ಈ ಇನ್ನಿಂಗ್ಸ್ ನಲ್ಲಿ ಹತ್ತು ಬೌಂಡರಿ ಮತ್ತು ಎಂಟು ಸಿಕ್ಸರ್ ಬಾರಿಸಿದ್ದರು.
ಫಿನ್ ಅಲೆನ್ ಅವರು ಈ ವಿಶ್ವದಾಖಲೆಯ ಇನ್ನಿಂಗ್ಸ್ ವೇಳೆ ಹಲವು ದಾಖಲೆ ಮುರಿದರು. ಟಿ20 ವಿಶ್ವಕಪ್‌ನಲ್ಲಿ ಇದಕ್ಕೂ ಮುನ್ನ ಅತಿ ವೇಗದ ಶತಕ 2016 ರಲ್ಲಿ ವಾಂಖೆಡೆಯಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಿಸ್ ಗೇಲ್ ಬಾರಿಸಿದ್ದರು. ಅಂದು ಗೇಲ್ 47 ಎಸೆತಗಳಲ್ಲಿ ಶತಕ ಪೂರೈಸಿದ್ದರು.
ಒಟ್ಟಾರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತಿ ವೇಗದ ಶತಕ ಬಾರಿಸಿದವರ ಪಟ್ಟಿಯಲ್ಲಿ ಫಿನ್ ಅಲೆನ್ ಮೂರನೇ ಸ್ಥಾನದಲ್ಲಿದ್ದಾರೆ.