ವರ್ಷಕ್ಕೆ ₹14 ಲಕ್ಷ ಕೋಟಿ ಬಡ್ಡಿ ಪಾವತಿ: ಕೇಂದ್ರದ ವಿರುದ್ಧ ಈಶ್ವರ್ ಖಂಡ್ರೆ ಕಿಡಿ
ದಾವಣಗೆರೆ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಸಾಲ ವಿಪರೀತ ಏರಿಕೆಯಾಗಿದೆ. ಪ್ರತಿ ವರ್ಷ ₹14 ಲಕ್ಷ ಕೋಟಿ ಬಡ್ಡಿ ಪಾವತಿಸಲಾಗುತ್ತಿದೆ. ಇದು ರಾಜ್ಯದ ಮೂರು ವರ್ಷದ ಬಜೆಟ್‌ಗೆ ಸಮ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆರೋಪಿಸಿದರು. ‘ದೇಶದಲ್ಲಿ ಆಡಳಿತ ನಡೆಸಿದ ಎಲ್ಲ ಪ್ರಧಾನಿಗಳಿಗಿಂತ ಹೆಚ್ಚು ಸಾಲ ಮಾಡಿದ ಕೀರ್ತಿ ನರೇಂದ್ರ ಮೊದಿ ಅವರಿಗೆ ಸಲ್ಲಬೇಕು. ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಜನರ ಮೇಲೆ ಆರ್ಥಿಕ ಹೊರೆ ಹೇರಲಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ಕೇಂದ್ರ ಸರ್ಕಾರ ಬಡವರು, ರೈತರು, ಕಾರ್ಮಿಕರು ಹಾಗೂ ಮಹಿಳೆಯರ ವಿರೋಧಿಯಾಗಿದೆ.
ಅನುದಾನದಲ್ಲಿ ಪಾಲು ನೀಡದೇ ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸುವ ಹುನ್ನಾರ ಮಾಡುತ್ತಿದೆ. ಈ ಮೂಲಕ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ’ ಎಂದು ಕಿಡಿಕಾರಿದರು. 12 ವರ್ಷ ಆಡಳಿತ ನಡೆಸಿ ₹ 190 ಲಕ್ಷ ಕೋಟಿ ಸಾಲ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಸಾಲಗಾರರ ಚಾಂಪಿಯನ್’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯವಾಡಿದರು.
‘ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಅಧಿಕಾರವಧಿಯ ಕೊನೆಯಲ್ಲಿ ₹ 2.70 ಲಕ್ಷ ಕೋಟಿ ಕಾಮಗಾರಿಗಳಿಗೆ ಅನುಮೋದನೆ ನೀಡಿದರು. ಬಜೆಟ್ ಅನುಮೋದನೆ ಇಲ್ಲದೇ ₹ 3.5 ಲಕ್ಷ ಕೋಟಿ ಹೊರೆಯನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಹೇರಿದರು. ಇದರಿಂದ ಸಾಲ ಮಾಡುವುದು ಅನಿವಾರ್ಯವಾಯಿತು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.