ಬೆಂಗಳೂರಲ್ಲಿ LPG ಬಿಕ್ಕಟ್ಟು: ಅರ್ಧದಷ್ಟು ಬಂಕ್‌ಗಳು ಬಂದ್, ಆಟೊ ಚಾಲಕರ ಪರದಾಟ
ಬೆಂಗಳೂರು: ಪಶ್ಚಿಮ ಏಷ್ಯಾ ಯುದ್ಧದ ಕಾರಣದಿಂದ ಬೆಂಗಳೂರಲ್ಲಿ ಎಲ್‌ಪಿಜಿ ಗ್ಯಾಸ್ ಕೊರತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ನಗರದ ಸುಮಾರು ಅರ್ಧದಷ್ಟು ಗ್ಯಾಸ್ ಸ್ಟೇಷನ್‌ಗಳು ಬಂದ್ ಆಗಿವೆ. ‘ಟೋಟಲ್ ಗ್ಯಾಸ್’ ತನ್ನ ಎಲ್ಲಾ ಸ್ಟೇಷನ್‌ಗಳನ್ನು ಮುಚ್ಚಿದ್ದರೆ, ‘ಸೂರ್ಯ ಗ್ಯಾಸ್’ ಮತ್ತು ‘ಸೂಪರ್ ಗ್ಯಾಸ್’ ಸ್ಟೇಷನ್‌ಗಳಲ್ಲಿ ಮಧ್ಯಾಹ್ನದ ವೇಳೆಗೆ ಸ್ಟಾಕ್ ಖಾಲಿಯಾಗುತ್ತಿದೆ. ಇನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ಬಂಕ್‌ಗಳ ಮುಂದೆ ಗ್ಯಾಸ್ ತುಂಬಿಸಲು ಸುಮಾರು 3 ಕಿಲೋಮೀಟರ್‌ವರೆಗೆ ಸರತಿ ಸಾಲು ಕಂಡುಬಂದಿದೆ. ಆದರೂ ಗ್ಯಾಸ್ ಸಿಗದೆ ಆಟೊ ಚಾಲಕರು ವಾಪಸ್ ಹೋಗುತ್ತಿದ್ದಾರೆ..
ಗಗನಕ್ಕೇರಿದ ಗ್ಯಾಸ್ ಬೆಲೆ...
ಪಶ್ಚಿಮ ಏಷ್ಯಾ ಯುದ್ಧ ಆರಂಭವಾಗುವುದಕ್ಕೂ ಮೊದಲು ಎಲ್‌ಪಿಜಿ ಬೆಲೆ ಕೇವಲ ₹58ರಷ್ಟಿತ್ತು. ಇದೀಗ ಗ್ಯಾಸ್ ಕೊರತೆಯಿಂದಾಗಿ ಬೆಲೆ ವಿಪರೀತ ಏರಿಕೆಯಾಗಿದ್ದು, ಒಂದೊಂದು ಕಡೆ ಒಂದೊಂದು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ (ಇಂಡಿಯನ್, ಎಚ್‌ಪಿ, ಬಿಪಿ) ಪ್ರತಿ ಲೀಟರ್‌ಗೆ ₹85ರಷ್ಟಿದೆ. ಖಾಸಗಿ ಬಂಕ್‌ಗಳಲ್ಲಿ ಪ್ರತಿ ಲೀಟರ್‌ಗೆ ₹120ರಿಂದ ₹125 ವರೆಗೆ ವಸೂಲಿ ಮಾಡುತ್ತಿವೆ.
‘ನಮಗೆ ಕಳೆದ ಮೂರು ದಿನಗಳಿಂದ ಸ್ಟಾಕ್ ಬಂದಿಲ್ಲ. ಕಳೆದ ಕೆಲವು ವಾರಗಳಿಂದ ದಿನಕ್ಕೆ 4 ಟನ್ ಬರುತ್ತಿದ್ದ ಗ್ಯಾಸ್ 2 ಟನ್‌ಗೆ ಇಳಿಕೆಯಾಗಿತ್ತು. ಈಗ ಅದು ಸಂಪೂರ್ಣ ನಿಂತುಹೋಗಿದೆ. ಪೂರೈಕೆ ಯಾವಾಗ ಸಹಜ ಸ್ಥಿತಿಗೆ ಮರಳುತ್ತದೆ ಎಂಬ ಮಾಹಿತಿ ಇಲ್ಲ’ ಎಂದು ಖಾಸಗಿ ಗ್ಯಾಸ್ ಸ್ಟೇಷನ್ ವ್ಯವಸ್ಥಾಪಕ ಚೇತನ್ ಗೌಡ ಅಳಲು ತೋಡಿಕೊಂಡಿದ್ದಾರೆ.