ಒಂದೇ ಒಂದು ವಿಕೆಟ್ ಪಡೆದ ಹೇಝಲ್ವುಡ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ! ಕಾರಣವೇನು?
IPL 2026: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 23ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ ಕೇವಲ 146 ರನ್ಗಳಿಸಿ ಆಲೌಟ್ ಆಯಿತು.
ಹೀಗೆ ಎಲ್ಎಸ್ಜಿ ಪಡೆ ಅಲ್ಪ ಮೊತ್ತಕ್ಕೆ ಆಲೌಟ್ ಆಗಲು ಮುಖ್ಯ ಕಾರಣ ಯುವ ವೇಗಿ ರಾಸಿಖ್ ಸಲಾಂ ದಾರ್, ಅನುಭವಿ ಬೌಲರ್ಗಳಾದ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹೇಝಲ್‌ವುಡ್. ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದಿದ್ದ ರಾಸಿಖ್ ಸಲಾಂ ದಾರ್ ಕೇವಲ 24 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಭುವನೇಶ್ವರ್ ಕುಮಾರ್ 4 ಓವರ್ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಜೋಶ್ ಹೇಝಲ್‌ವುಡ್ 4 ಓವರ್ಗಳಲ್ಲಿ 20 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಆರ್ಸಿಬಿ ಪರ ಮೂವರು ಅತ್ಯುತ್ತಮ ದಾಳಿ ಸಂಘಟಿಸಿದರೂ ಅಂತಿಮವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದ್ದು ಜೋಶ್ ಹೇಝಲ್ವುಡ್ಗೆ. ಇದರ ಬೆನ್ನಲ್ಲೇ 4 ಹಾಗೂ 3 ವಿಕೆಟ್ಗಳನ್ನು ಕಬಳಿಸಿದ್ದರೂ ರಾಸಿಖ್ ಸಲಾಂ ಹಾಗೂ ಭುವನೇಶ್ವರ್ ಕುಮಾರ್ಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಯಾಕೆ ನೀಡಲಾಗಿಲ್ಲ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ…
ಎಕಾನಮಿ ರೇಟ್: ಸಾಮಾನ್ಯವಾಗಿ ಬ್ಯಾಟರ್‌ಗಳ ಸ್ವರ್ಗ ಎನಿಸಿಕೊಂಡಿರುವ ಚಿನ್ನಸ್ವಾಮಿ ಮೈದಾನದಲ್ಲಿ ಜೋಶ್ ಹೇಝಲ್‌ವುಡ್ ರನ್ ಬಿಟ್ಟುಕೊಡಲು ಜಿಪುಣತನ ತೋರಿದರು. ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 20 ರನ್ ನೀಡಿ 1 ಪ್ರಮುಖ ವಿಕೆಟ್ ಪಡೆದರು. ಅಂದರೆ ಕೇವಲ 5 ರನ್ಗಳ ಎಕಾನಮಿ ರೇಟ್ನಲ್ಲಿ ಅವರು ರನ್ ಬಿಟ್ಟು ಕೊಟ್ಟಿದ್ದರು. ಇದು ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಅಪರೂಪದ ಸಾಧನೆ.