'ಇನ್ಮುಂದೆ ಕಾಂಗ್ರೆಸ್ ಸ್ಮಶಾನಕ್ಕೆ ಹೋದ ಹೆಣದಂತೆ' ಗುಂಡ್ಲುಪೇಟೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಗುಡುಗು
ಗುಂಡ್ಲುಪೇಟೆ (ಏ.21): ಮಹಿಳಾ ಮೀಸಲು ವಿಧೇಯಕ ಸೋಲಿಗೆ ಕಾರಣವಾದ ಕಾಂಗ್ರೆಸ್ ಪಕ್ಷ 70 ಕೋಟಿ ಮಹಿಳೆಯರಿಗೆ ಮುಖಭಂಗ ಮಾಡಿದ್ದು, ಇನ್ಮುಂದೆ ಕಾಂಗ್ರೆಸ್ ಸ್ಥಿತಿ ಸ್ಮಶಾನಕ್ಕೆ ಹೋದ ಹೆಣದಂತಾಗುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳಾ ಮೀಸಲು ಸಾಂವಿಧಾನಿಕ ತಿದ್ದುಪಡಿ ಮಸೂದೆ ಸೋಲಿಗೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಕಾರಣವಾಗಿವೆ. ದೇಶದ ಶೇ.೫೦ರಷ್ಟಿರುವ ಮಹಿಳೆಯರು ಕಾಂಗ್ರೆಸನ್ನು ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಹುಮಾನ ಕೊಡಬಹುದು:ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗೆ ಮೊದಲ ಬಹುಮಾನ ಕೊಡಬಹುದು. ಬೆಲೆ ಏರಿಕೆಯಲ್ಲಿ ಕಾಂಗ್ರೆಸ್ ಮೀರಿಸೋದಕ್ಕೆ ಯಾವ ಪಕ್ಷದ ಸರ್ಕಾರದಿಂದಲೂ ಸಾಧ್ಯವಿಲ್ಲ ಎಂದರು. ಕಾಂಗ್ರೆಸ್ ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರ ದಿವಾಳಿಯಾಗಿದೆ. ಅಲ್ಲಿನ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಶೌಚಾಲಯಕ್ಕೂ ಟ್ಯಾಕ್ಸ್ ಹಾಕಲು ಅಲ್ಲಿನ ಸರ್ಕಾರ ಹೊರಟಿದೆ. ನಮ್ಮ ರಾಜ್ಯ ಸರ್ಕಾರ ಕೂಡ ಪ್ರಧಾನಿ ಮೋದೀಜಿ ಕಟ್ಟಿಸಿದ ಶೌಚಾಲಯಕ್ಕೂ ಟ್ಯಾಕ್ಸ್ ಹಾಕುತ್ತಾರೇನೋ ಕಾದು ನೋಡಬೇಕು ಎಂದರು.
ದಲಿತರಿಗೆ ಅನ್ಯಾಯ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಎಸ್‌ಇಪಿ, ಟಿಎಸ್‌ಪಿ ಹಣ ಬಳಕೆ ಮಾಡಿಕೊಂಡಿದೆ. ಹೀಗಾದಾಗ ದಲಿತರಿಗೆಲ್ಲಿ ಫ್ರೀ ಗ್ಯಾರಂಟಿ ಸಿಕ್ಕಿದಂತಾಗುತ್ತದೆ? ಇತ್ತ ಒಳ ಮೀಸಲಾತಿಯಲ್ಲೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಸಿ.ಮಹದೇವಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಡಾ.ನವೀನ್ ಮೌರ್ಯ, ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಎಲ್.ಸುರೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ಗರಗನಹಳ್ಳಿ ಮಹೇಂದ್ರ, ದಲಿತ ಮುಖಂಡ ಬಸವರಾಜು, ರಾಜೇಂದ್ರ ಸೇರಿದಂತೆ ಹಲವರಿದ್ದರು.