ಗಲ್ಫ್ ನಿಂದ ವಾಪಸ್ಸಾದ ಅಮೆರಿಕದ ಬೃಹತ್ ಯುದ್ಧ ನೌಕೆ; ಇರಾನ್ ಜೊತೆಗಿನ ಸಂಧಾನ ವಿಫಲ?
ವಾಷಿಂಗ್ಟನ್: ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿದ್ದ ವಿಶ್ವದ ಅತ್ಯಂತ ದೊಡ್ಡ ವಿಮಾನವಾಹಕ ಯುದ್ಧ ನೌಕೆ 'ಯುಎಸ್ಎಸ್ ಜೆರಾಲ್ಡ್ ಆರ್ ಫೋರ್ಡ್' ಈಗ ಪರ್ಷಿಯನ್ ಕೊಲ್ಲಿ ಯನ್ನು ತೊರೆದಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಮಾಹಿತಿ ನೀಡಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಮಾತುಕತೆಗಳು ಹಳ್ಳ ಹಿಡಿದಿರುವ ಬೆನ್ನಲ್ಲೇ ಈ ಬೃಹತ್ ನೌಕೆಯು ಮಧ್ಯಪ್ರಾಚ್ಯದಿಂದ ಹಿಂದಕ್ಕೆ ಸರಿದಿರುವುದು ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಪ್ರಸ್ತುತ ಈ ನೌಕೆಯು ಅಮೆರಿಕದ ಯುರೋಪಿಯನ್ ಕಮಾಂಡ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ಅದರ ಸ್ಥಾನಕ್ಕೆ ಈಗ 'ಯುಎಸ್ಎಸ್ ಅಬ್ರಹಾಂ ಲಿಂಕನ್' ಮತ್ತು 'ಯುಎಸ್ಎಸ್ ಜಾರ್ಜ್ ಹೆಚ್‌ಡಬ್ಲ್ಯೂ ಬುಷ್' ಎಂಬ ಎರಡು ಬೃಹತ್ ಯುದ್ಧ ನೌಕೆಗಳು ಅದೇ ಭಾಗದಲ್ಲಿ ಕಾರ್ಯಾಚರಣೆ ಮುಂದುವರಿಸಲಿವೆ. ಸದ್ಯಕ್ಕೆ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಒಟ್ಟು 20 ಯುದ್ಧ ನೌಕೆಗಳು ಇರಾನ್ ಮೇಲೆ ಕಣ್ಣಿಟ್ಟಿವೆ. ಸುಮಾರು 10 ತಿಂಗಳಿಗೂ ಹೆಚ್ಚು ಕಾಲ ಸತತವಾಗಿ ಸಮುದ್ರದಲ್ಲಿದ್ದ ಈ ಜೆರಾಲ್ಡ್ ಆರ್ ಫೋರ್ಡ್ ನೌಕೆಯು ಹಲವು ಮಹತ್ವದ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿತ್ತು.
ಕೆರಿಬಿಯನ್ ಸಮುದ್ರದಲ್ಲಿ ಮಾದಕ ವಸ್ತುಗಳ ಸಾಗಾಟವನ್ನು ತಡೆಯುವುದು ಮತ್ತು ನಿರ್ಬಂಧಿತ ತೈಲ ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸಿತ್ತು. ಅಷ್ಟೇ ಅಲ್ಲದೆ, ಅಮೆರಿಕದ ಪಡೆಗಳು ವೆನೆಜುವೆಲಾ ನಾಯಕ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆದ ಸಾಹಸಿಕ ಕಾರ್ಯಾಚರಣೆಯಲ್ಲೂ ಈ ನೌಕೆ ಮುಂಚೂಣಿಯಲ್ಲಿತ್ತು. ಈ ಸುದೀರ್ಘ ನಿಯೋಜನೆಯು ಅಮೆರಿಕದ ನೌಕಾಪಡೆಯ ಶಕ್ತಿಯನ್ನು ಜಗತ್ತಿಗೆ ಸಾಬೀತುಪಡಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ, ಈ ಹತ್ತು ತಿಂಗಳ ಪಯಣ ನೌಕೆಗೆ ಸುಲಭವಾಗಿರಲಿಲ್ಲ. ಕಳೆದ ಮಾರ್ಚ್ 12 ರಂದು ನೌಕೆಯ ಲಾಂಡ್ರಿ ಕೊಠಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ದೊಡ್ಡ ಅವಾಂತರವೇ ನಡೆದಿತ್ತು. ಈ ಘಟನೆಯಲ್ಲಿ ಇಬ್ಬರು ನಾವಿಕರು ಗಾಯಗೊಂಡಿದ್ದರು ಮತ್ತು ಸೈನಿಕರು ಮಲಗುವ ಸುಮಾರು 100 ಬೆಡ್‌ಗಳು ಬೆಂಕಿಗೆ ಆಹುತಿಯಾಗಿ ಭಾರಿ ಹಾನಿ ಸಂಭವಿಸಿತ್ತು. ಇದರ ಜೊತೆಗೆ, ನೌಕೆಯ ಒಳಭಾಗದಲ್ಲಿ ಶೌಚಾಲಯದ ಸಮಸ್ಯೆಯೂ ಸೈನಿಕರನ್ನು ಹೈರಾಣಾಗಿಸಿತ್ತು. ನೌಕೆಯ ಅತ್ಯಾಧುನಿಕ ಶೌಚಾಲಯ ವ್ಯವಸ್ಥೆಯಲ್ಲಿ ಪದೇ ಪದೇ ತಡೆ ಉಂಟಾಗುತ್ತಿದ್ದರಿಂದ, ನೌಕೆಯಲ್ಲಿದ್ದ ನೂರಾರು ಸಿಬ್ಬಂದಿಗಳು ಶೌಚಾಲಯಕ್ಕಾಗಿ ದೀರ್ಘ ಸರತಿ ಸಾಲಿನಲ್ಲಿ ನಿಲ್ಲಬೇಕಾದ ವಿಚಿತ್ರ ಪರಿಸ್ಥಿತಿ ಎದುರಾಗಿತ್ತು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಪ್ರಸ್ತುತ ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಜಾರಿಯಲ್ಲಿದ್ದರೂ, ಉಭಯ ದೇಶಗಳ ನಡುವಿನ ಬೂದಿ ಮುಚ್ಚಿದ ಕೆಂಡದಂತಿರುವ ಬಿಕ್ಕಟ್ಟು ಮಾತ್ರ ಇನ್ನೂ ಬಗೆಹರಿದಿಲ್ಲ. ಇರಾನ್ ಸರ್ಕಾರವು ವಿಶ್ವದ ಅತ್ಯಂತ ಪ್ರಮುಖ ಜಲಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಿ ವ್ಯಾಪಾರ ವಹಿವಾಟಿಗೆ ಅಡ್ಡಿಪಡಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಪಡೆಗಳು ಇರಾನ್‌ನ ಪ್ರಮುಖ ಬಂದರುಗಳಿಗೆ ದಿಗ್ಬಂಧನ ವಿಧಿಸಿವೆ. ಇಂತಹ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಅಮೆರಿಕ ತನ್ನ ಪ್ರಮುಖ ಯುದ್ಧ ನೌಕೆಯನ್ನು ವಾಪಸ್ ಕರೆಸಿಕೊಂಡಿರುವುದು, ಎರಡೂ ದೇಶಗಳ ನಡುವಿನ ಮಾತುಕತೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆಯೇ ಎಂಬ ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ.