ಶೃಂಗೇರಿ ಕ್ಷೇತ್ರದಲ್ಲಿ ಓಟ್ ಚೋರಿ ಅಲ್ಲ, ಓಟ್ ಡಕಾಯಿತಿ ನಡೆದಿದೆ: ಸಿದ್ದರಾಮಯ್ಯ
ಬೆಂಗಳೂರು: 'ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗೆ ಬಂದಿದ್ದ ಮತಗಳು ಅಮಾನ್ಯ ಆಗಿವೆ. ಇಡೀ ದೇಶದಲ್ಲೇ ಇಂತಹ ಕ್ರಿಮಿನಲ್ ಚಟುವಟಿಕೆ ಎಲ್ಲೂ ನಡೆದಿಲ್ಲ. ಈ ಬಗ್ಗೆ ತನಿಖೆ ನಡೆದು ಸತ್ಯ ಹೊರಬರಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು. ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿದ ಅವರು, 'ಇದು ಓಟ್ ಚೋರಿ ಅಲ್ಲ. ಓಟ್ ಡಕಾಯಿತಿ' ಎಂದು ಆರೋಪಿಸಿದರು. 'ಅಂಚೆ ಮತಗಳನ್ನು ಅಮಾನ್ಯ ಮಾಡುವಂತೆ ಜಿಲ್ಲಾಧಿಕಾರಿ, ಚುನಾವಣಾಧಿಕಾರಿಯ ಮೇಲೆ ಕೇಂದ್ರದಿಂದ ಒತ್ತಡ ಇರಬಹುದು. ಯಾರೇ ಅಧಿಕಾರಿಗಳು ಇರಲಿ, ತಪ್ಪು ಮಾಡಿದ್ದರೆ ಶಿಕ್ಷೆ ಆಗಬೇಕು' ಎಂದರು.
'ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ನ್ಯಾಯಾಲಯದ ಆದೇಶದಂತೆ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜೇಗೌಡ 201 ಮತಗಳ ಅಂತರದಿಂದ ಗೆದ್ದಿದ್ದರು. ರಾಜೇಗೌಡಗೆ 59.170 ಮತಗಳು ಬಂದಿದ್ದವು, ಎದುರಾಳಿ ಜೀವರಾಜ್ ಗೆ 58,970 ಮತಗಳು ಬಂದಿತ್ತು. ಚುನಾವಣಾ ಏಜೆಂಟರು, ರಿಟರ್ನಿಂಗ್ ಆಫೀಸರ್ ಗಳು ಸಹಿ ಮಾಡಿ ಫಲಿತಾಂಶ ಘೋಷಣೆ ಮಾಡಿದ್ದರು. ನಂತರ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ಮರು ಎಣಿಕೆ ಮಾಡಬೇಕೆಂದು ಹೈಕೋರ್ಟ್ ಗೆ ಹೋಗಿದ್ದರು. ಅಂಚೆ ಮತಗಳ ಮರುಎಣಿಕೆ ಮಾಡಿ ಲೋಪ ಆಗಿದ್ದರೆ ಪತ್ತೆ ಹಚ್ಚುವಂತೆ ಕೋರ್ಟ್ ಸೂಚಿಸಿತ್ತು. ಕೋರ್ಟ್ ಆದೇಶದಂತೆ ಮರು ಎಣಿಕೆ ನಡೆಯಿತು. ಅಂಚೆ ಮತಗಳ ಮರುಎಣಿಕೆಯಲ್ಲಿ ರಾಜೇಗೌಡಗೆ ಲಭಿಸಿದ್ದ 250 ಮತಗಳು ಅಮಾನ್ಯವಾಗಿವೆ. ಇದು ಹೇಗೆ ಅಮಾನ್ಯ ಆಗುತ್ತದೆ? ಇದನ್ನು ನೋಡಿದಾಗ ಬಿಜೆಪಿಯವರು ಓಟ್ ಚೋರಿ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತೆ' ಎಂದರು.
'ಜೀವರಾಜ್ 201 ಮತಗಳಿಂದ ಸೋತಿದ್ದರು, ಮರು ಎಣಿಕೆಯಲ್ಲಿ ಅವರಿಗೆ 250 ಮತಗಳು ಜಾಸ್ತಿಯಾಗಿದೆ. ಈ ಬಗ್ಗೆ ಅಧಿಕಾರಿಗಳು, ಚುನಾವಣಾ ತಜ್ಞರ ಜೊತೆ ಮಾತನಾಡಿದ್ದೇನೆ. ಮತ ಎಣಿಕೆಯ ನಂತರ ಎಲ್ಲ ದಾಖಲಾತಿಗಳನ್ನು ಟ್ರಂಕ್ ನಲ್ಲಿ ಇಟ್ಟು ಕಳುಹಿಸುತ್ತಾರೆ. ಮತ ಎಣಿಕೆ ವೇಳೆ ಬಿಜೆಪಿ ಕೇಂದ್ರ, ರಾಜ್ಯದಲ್ಲೂ ಇತ್ತು, ಡಬಲ್ ಎಂಜಿನ್ ಸರ್ಕಾರ ಇತ್ತು. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ರಾಜ್ಯದಲ್ಲಿ ಆಡಳಿತದಲ್ಲಿ ಇತ್ತು. ಹೀಗಾಗಿ ಬಿಜೆಪಿಯವರು ಸಿಬ್ಬಂದಿ ಮೂಲಕ ತಿದ್ದಿಸಿದ್ದಾರೆ ಅನಿಸುತ್ತಿದೆ' ಎಂದರು.