Select Location
All Locations
State
Region
City / District
ನಕಲಿ ಇನ್‌ಸ್ಟಾಗ್ರಾಮ್ ಪ್ರೊಫೈಲ್, ಪರಸ್ತ್ರೀ ವ್ಯಾಮೋಹ ಹೊಂದಿದ್ದ ಪತಿಗೆ ಗಾಳ ಹಾಕಿದ ಪತ್ನಿ

ನಕಲಿ ಇನ್‌ಸ್ಟಾಗ್ರಾಮ್ ಪ್ರೊಫೈಲ್, ಪರಸ್ತ್ರೀ ವ್ಯಾಮೋಹ ಹೊಂದಿದ್ದ ಪತಿಗೆ ಗಾಳ ಹಾಕಿದ ಪತ್ನಿ

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಿನಿಮೀಯ ಶೈಲಿಯ ಘಟನೆಯೊಂದು ನಡೆದಿದ್ದು, ಪರಸ್ತ್ರೀ ವ್ಯಾಮೋಹ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯೇ ಹೆಣೆದ ಜಾಲಕ್ಕೆ ಬಿದ್ದು ಈಗ ಜೈಲು ಪಾಲಾಗಿರುವ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಕಳೆದ 5 ವರ್ಷಗಳಿಂದ ಪತ್ನಿ ಮತ್ತು ಮಗುವನ್ನು ನಿರ್ಲಕ್ಷಿಸಿದ್ದ ಪತಿ, ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 'ಅಪರಿಚಿತ ಯುವತಿʼಯನ್ನು ಭೇಟಿಯಾಗಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಘಟನೆಯ ವಿವರ: ನವಾಬ್‌ಗಂಜ್ ನಿವಾಸಿ, ಸೋನಿ ತ್ರಿಪಾಠಿ ಮತ್ತು ಪ್ರತಾಪ್‌ಗಢದ ಪ್ರಭುದತ್ ತ್ರಿಪಾಠಿ ಅಲಿಯಾಸ್ ರಾಜಾ ಅವರಿಗೆ 9 ವರ್ಷಗಳ ಹಿಂದೆ ವಿವಾಹವಾಗಿತ್ತು. ಪತ್ನಿ ನೀಡಿದ ದೂರಿನ ಪ್ರಕಾರ, 5 ವರ್ಷಗಳ ಹಿಂದೆ ಸೋನಿ ಅವರನ್ನು ಮನೆಯಿಂದ ಹೊರಹಾಕಲಾಗಿತ್ತು. ಅಂದಿನಿಂದ ಅವರು ತಮ್ಮ 1 ವರ್ಷದ ಹೆಣ್ಣು ಮಗುವಿನೊಂದಿಗೆ ತವರು ಮನೆಯಲ್ಲಿ ವಾಸಿಸುತ್ತಿದ್ದರು. ಈ 5 ವರ್ಷಗಳಲ್ಲಿ ಪ್ರಭುದತ್/ ರಾಜಾ, ಪತ್ನಿಯನ್ನಾಗಲಿ ಅಥವಾ ಮಗುವನ್ನಾಗಲಿ ನೋಡಲು ಬಂದಿರಲಿಲ್ಲ ಮತ್ತು ಯಾವುದೇ ಜವಾಬ್ದಾರಿಯನ್ನು ಹೊತ್ತಿರಲಿಲ್ಲ.

ತನ್ನನ್ನು ನಿರ್ಲಕ್ಷಿಸುತ್ತಿದ್ದ ಪತಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ ಪತ್ನಿ ಸೋನಿ, ಇನ್‌ಸ್ಟಾಗ್ರಾಮ್‌ನಲ್ಲಿ ಬೇರೊಬ್ಬ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು, ತನ್ನ ಪತಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರು. ಅದು ತನ್ನ ಪತ್ನಿಯೇ ಇರಬಹುದು ಎಂಬ ಅರಿವಿಲ್ಲದ ಪ್ರಭುದತ್, ಆಕೆಯೊಂದಿಗೆ ನಿರಂತರವಾಗಿ ಚಾಟಿಂಗ್ ಮಾಡಲು ಶುರು ಮಾಡಿದ. ಹೀಗೆ ಚಾಟಿಂಗ್ ಮುಂದುವರಿದಂತೆ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ, ನೇರವಾಗಿ ಭೇಟಿಯಾಗಲೇಬೇಕು ಎಂದು ತಿಳಿಸಿದ್ದ. ಭೇಟಿಯಾಗಲು ಹಲವು ಬಾರಿ ನಿರಾಕರಿಸಿದ್ದ ಪತ್ನಿ ಸೋನಿ ಮೇ 2 ರಂದು ದಾರಾಗಂಜ್‌ನ ನಾಗವಾಸುಕಿ ದೇವಸ್ಥಾನಕ್ಕೆ ಭೇಟಿಯಾಗಲು ಬರುವಂತೆ ತಿಳಿಸಿದರು. ತನ್ನ ಇನ್‌ಸ್ಟಾಗ್ರಾಮ್ ಗೆಳತಿಯನ್ನು ಭೇಟಿಯಾಗುವ ಉತ್ಸಾಹದಲ್ಲಿ ಅಲ್ಲಿಗೆ ಬಂದ ಪ್ರಭುದತ್‌ಗೆ ಎದುರಿಗಿದ್ದ ಪತ್ನಿಯನ್ನು ಕಂಡು ಶಾಕ್ ಆಗಿದ್ದಾನೆ. ಸತ್ಯ ತಿಳಿಯುತ್ತಿದ್ದಂತೆಯೇ ಸಿಟ್ಟಿಗೆದ್ದ ಪ್ರಭುದತ್ ಪತ್ನಿಯ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಅಲ್ಲಿಂದ ಓಡಿಹೋಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿ ಗದ್ದಲ ಉಂಟಾದ ಕಾರಣ ಪೊಲೀಸರು ತಕ್ಷಣ ಅಲ್ಲಿಗೆ ಧಾವಿಸಿ ಪ್ರಭುದತ್‌ನನ್ನು ವಶಕ್ಕೆ ಪಡೆದಿದ್ದಾರೆ. ಪತ್ನಿ ಸೋನಿ ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


Udayavani 6 hours ago
Home Flash News