ಮಗಳ ಮದುವೆಗೆ ಖರೀದಿಸಿದ್ದ ಚಿನ್ನವನ್ನು ಹೋಟೆಲ್ನಲ್ಲಿ ಮರೆತುಹೋದ ತಾಯಿ: ಮುಂದಾಗಿದ್ದು ಭಾವುಕ ಕ್ಷಣ
ಬಾಗಲಕೋಟೆ, ಮೇ 06: ಮಗಳ ಮದುವೆಗೆಂದು ಖರೀದಿಸಿದ್ದ ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಅಭರಣವನ್ನು ಮಹಿಳೆಯೋರ್ವರು ಹೋಟೆಲ್ನಲ್ಲಿಯೇ ಮರೆತು ಬಿಟ್ಟು ಹೋಗಿದ್ದು, ಇದನ್ನು ಹೋಟೆಲ್ ಮಾಲೀಕರು ಮರಳಿ ಆಕೆಗೆ ಹಸ್ತಾಂತರಿಸಿರುವ ಘಟನೆಗೆ ಬಾಗಲಕೋಟೆ ಸಾಕ್ಷಿಯಾಗಿದೆ. ಸಿಕ್ಕ ಬಂಗಾರವನ್ನು ಇಟ್ಟುಕೊಳ್ಳದೆ ಅದರ ನಿಜ ವಾರಸುದಾರರಿಗೆ ಹಸ್ತಾಂತರಿಸಿದ ಹೋಟೆಲ್ ಮಾಲೀಕನ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಮರಳಿ ಬಂಗಾರ ಸಿಕ್ಕ ಹಿನ್ನೆಲೆ ಮಹಿಳೆ ಕೆಲ ಕಾಲ ಭಾವುಕರಾದ ಪ್ರಸಂಗವೂ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬೆಳ್ಳಿಖಿಂಡಿ ಗ್ರಾಮದ ಲಕ್ಷ್ಮವ್ವ ಮುದನೂರು ಎಂಬ ಮಹಿಳೆ ಮಗಳ ಮದುವೆಗೆಂದು ಖರೀದಿಸಿದ್ದ ಚಿನ್ನದ ಜೊತೆ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಹೋಟೆಲ್ ಒಂದಕ್ಕೆ ಟಿಫಿನ್ ತಿನ್ನಲೆಂದು ತೆರಳಿದ್ದರು. ತಿಂಡಿ ತಿಂದ ಬಳಿಕ ತಾವು ಖರೀದಿಸಿ ತಂದಿದ್ದ ಚಿನ್ನದ ಗೋರಮಾಳ ಸರವನ್ನ ಮರೆತು ಹೋಟೆಲ್ನಲ್ಲಿಯೇ ಬಿಟ್ಟು ತೆರಳಿದ್ದರು. ಯಾರೋ ಚಿನ್ನವನ್ನು ಬಿಟ್ಟು ಹೋಗಿರುವ ವಿಷಯ ತಿಳಿಯುತ್ತಿದ್ದಂತೆ ಹೊಟೇಲ್ ಮಾಲೀಕ ಹುಸೇನಸಾಬ್ ಹಾಗೂ ಆತನ ತಾಯಿ ಮಾಸಾಬಿ ಅದನ್ನು ಭದ್ರವಾಗಿ ಎತ್ತಿಟ್ಟಿದ್ದರು. ಇದಾದ ಮೂರು ದಿನಗಳ ಬಳಿಕ ಲಕ್ಷ್ಮವ್ವ ತಾನು ಮರೆತು ಬಿಟ್ಟು ಹೋಗಿದ್ದ ಆಭರಣದ ಬಗ್ಗೆ ವಿಚಾರಿಸಿಕೊಂಡು ಬಂದಿದ್ದಾರೆ. ಈ ವೇಳೆ ಆಕೆಯ ಬಳಿ ಆಭರಣದ ಕುರುಹು ಕೇಳಿರುವ ಹೋಟೆಲ್ ಮಾಲೀಕರು ಚಿನ್ನ ಲಕ್ಷ್ಮವ್ವಗ್ಗೇ ಸೇರಿದ್ದೆಂದು ಖಚಿತಪಡಿಸಿಕೊಂಡು ಅದನ್ನು ಅವರಿಗೆ ಹಿಂದಿರುಗಿಸಿದ್ದಾರೆ.
ಮಾನವೀಯತೆಯ ದೃಷ್ಟಿಯಿಂದ ತಮಗೆ ಸಿಕ್ಕಿದ್ದ ಚಿನ್ನಾಭರಣವನ್ನು ವಾರಸುದಾರರಿಗೆ ಮರಳಿ ಹಸ್ತಾಂತರಿಸಿರುವ ಹೊಟೇಲ್ ಮಾಲೀಕ ಹುಸೇನ್ ಸಾಬ್ ಮತ್ತು ಅವರ ತಾಯಿ ಮಾಸಾಬಿ ಅವರ ಕಾರ್ಯಕ್ಕೆ ಲಕ್ಷ್ಮವ್ವ ಮೆಚ್ಚುಗೆ ವ್ಯಕ್ತಪಡಿಸಿದ್ದು, ನೀನು ಸಹ ಒಬ್ಬ ನನ್ನ ಮನೆಯ ಮಗಳು ಎಂದು ಮಾಸಾಬಿ ಅವರಿಗೆ ಸೀರೆ ನೀಡಿ ಧನ್ಯವಾದ ಅರ್ಪಿಸಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.