2028ಕ್ಕೆ ರಾಜ್ಯ ಬಿಜೆಪಿಯಿಂದಲೂ ಗ್ಯಾರಂಟಿ? 'ಮುಳ್ಳನ್ನ ಮುಳ್ಳಿನಿಂದ್ಲೇ ತೆಗಿತೀವಿ' ಅಂದಿದ್ಯಾಕೆ ಆರ್ ಅಶೋಕ್?
ಬೆಂಗಳೂರು (ಮೇ.7): 2028ರ ವಿಧಾನಸಭಾ ಚುನಾವಣೆಯಲ್ಲಿ ಮುಳ್ಳನ್ನು ಮುಳ್ಳಿಂದಲೇ ತೆಗೆಯುತ್ತೇವೆ ಎನ್ನುವ ಮುಖಾಂತರ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಮಾದರಿಯಲ್ಲಿ ಗ್ಯಾರಂಟಿಗಳನ್ನು ಘೋಷಿಸುವ ಸೂಚನೆ ನೀಡಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಪಕ್ಷದ ಕೇಂದ್ರದ ನಾಯಕರು ಗ್ಯಾರಂಟಿಗಳ ಘೋಷಣೆಗೆ ಅವಕಾಶ ನೀಡಲಿಲ್ಲ. ಈಗ ಎಲ್ಲ ಕಡೆ ಗ್ಯಾರಂಟಿಗಳ ಘೋಷಣೆ ನಡೆಯುತ್ತಿದೆ. 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಕೌಂಟರ್ ಆಗಿ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೇವೆ. ಮುಳ್ಳನ್ನು ಮುಳ್ಳಿಂದಲೇ ತೆಗೆಯುತ್ತೇವೆ. ಅವರು ಸಣ್ಣ ಮುಳ್ಳು ಹಾಕಿದರೆ, ನಾವು ದೊಡ್ಡ ಮುಳ್ಳು ಹಾಕುತ್ತೇವೆ. ಏನಾಗಲಿದೆ ಎಂದು ಕಾದು ನೋಡಿ. ಅವರೇ ದಾರಿ ತೋರಿಸಿಕೊಟ್ಟಿದ್ದಾರೆ ಎಂದರು.
ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದವರು ಐದು ಗ್ಯಾರಂಟಿ ಘೋಷಿಸಿದ್ದರು. ನಾವು ಒಂದೂ ಗ್ಯಾರಂಟಿ ಘೋಷಿಸಲಿಲ್ಲ. ಹೀಗಾಗಿ ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ಚುನಾವಣೆ ಗೆದ್ದಿದೆ. ನಾವು ಗ್ಯಾರಂಟಿಗಳ ವಿರೋಧಿಗಳಲ್ಲ. ಇನ್ನೂ 25 ಗ್ಯಾರಂಟಿ ಕೊಡಿ ಎಂದು ಸಲಹೆ ನೀಡುತ್ತೇನೆ. ನಾನು ಗ್ಯಾರಂಟಿಗಳನ್ನು ಎಂದೂ ವಿರೋಧಿಸಿಲ್ಲ. ಅವೈಜ್ಞಾನಿಕ ಗ್ಯಾರಂಟಿಗಳ ಬಗ್ಗೆ ನನ್ನ ವಿರೋಧವಿದೆ. ಗ್ಯಾರಂಟಿ ಘೋಷಿಸುವ ಮುನ್ನ ಅದರ ಪರಿಣಾಮಗಳು ಏನು ಎನ್ನುವುದರ ಬಗ್ಗೆ ಹೇಳಬೇಕು ಎಂಬುದು ನಮ್ಮ ವಾದವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.