ದಿ ಆರ್ಟ್ ಆಫ್ ಲಿವಿಂಗ್ 45ನೇ ವಾರ್ಷಿಕೋತ್ಸವ: ಪ್ರಧಾನಿ ಮೋದಿಯಿಂದ ಐತಿಹಾಸಿಕ ಭಾಷಣ
ನವದೆಹಲಿ: ವಿಶ್ವವಿಖ್ಯಾತ ಆಧ್ಯಾತ್ಮಿಕ ಮತ್ತು ಮಾನವೀಯ ಸಂಸ್ಥೆ ‘ದಿ ಆರ್ಟ್ ಆಫ್ ಲಿವಿಂಗ್’ (The Art of Living) ತನ್ನ 45 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸುತ್ತಿದ್ದು, ಈ ಐತಿಹಾಸಿಕ ಸಮಾಗಮವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ನವದೆಹಲಿಯಲ್ಲಿ ಇದೇ ಮೇ 10 ರಂದು ನಡೆಯಲಿರುವ ಈ ಬೃಹತ್ ಕಾರ್ಯಕ್ರಮವು ಸಂಸ್ಥೆಯ 45ನೇ ವಾರ್ಷಿಕೋತ್ಸವ ಮಾತ್ರವಲ್ಲದೆ, ಅದರ ಸಂಸ್ಥಾಪಕರಾದ ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರ 70ನೇ ಜನ್ಮದಿನದ ಸಂಭ್ರಮವನ್ನೂ ಒಳಗೊಂಡಿದೆ.
ಜಾಗತಿಕ ಮಟ್ಟದ ಮಹಾ ಸಮಾಗಮ ಈ ಸಂಭ್ರಮಾಚರಣೆಯಲ್ಲಿ ವಿಶ್ವದ 182ಕ್ಕೂ ಹೆಚ್ಚು ದೇಶಗಳ ಜನರು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಪಾಲ್ಗೊಳ್ಳಲಿದ್ದಾರೆ. ಸರ್ಕಾರದ ನಾಯಕರು, ನಾಗರಿಕ ಸೇವಾ ಅಧಿಕಾರಿಗಳು, ರೈತರು, ಇಂಜಿನಿಯರ್ಗಳು, ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ಸಾವಿರಾರು ಅಂತರರಾಷ್ಟ್ರೀಯ ಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸೇರಲಿರುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ. ನೂತನ ಯೋಜನೆಗಳಿಗೆ ಮೋದಿ ಚಾಲನೆ ಮಾನ್ಯ ಪ್ರಧಾನಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡುವುದರ ಜೊತೆಗೆ ಹಲವು ಮಹತ್ವದ ಕಾರ್ಯಗಳನ್ನು ನೆರವೇರಿಸಲಿದ್ದಾರೆ.
ನೂತನವಾಗಿ ನಿರ್ಮಿಸಲಾದ ಅತ್ಯಾಧುನಿಕ ಧ್ಯಾನ ಮಂದಿರವನ್ನು ಪ್ರಧಾನಿಗಳು ಲೋಕಾರ್ಪಣೆಗೊಳಿಸಲಿದ್ದಾರೆ. ಮಾನಸಿಕ ಆರೋಗ್ಯ, ಪ್ರಕೃತಿ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿ ಮತ್ತು ಸಾಮಾಜಿಕ ಪರಿವರ್ತನೆಯಂತಹ ವರ್ಷಪೂರ್ತಿ ನಡೆಯುವ ದೇಶವ್ಯಾಪಿ ಸೇವಾ ಯೋಜನೆಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ವಿಶ್ವ ಶಾಂತಿಗಾಗಿ ಜಾಗತಿಕ ಧ್ಯಾನ ಮೇ 13, 2026 ರಂದು ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರ ನೇತೃತ್ವದಲ್ಲಿ 'ವಿಶ್ವ ಶಾಂತಿಗಾಗಿ ಜಾಗತಿಕ ಧ್ಯಾನ' ನಡೆಯಲಿದೆ. ಇದು ಪ್ರಪಂಚದಾದ್ಯಂತ ನೇರ ಪ್ರಸಾರವಾಗಲಿದ್ದು, ಲಕ್ಷಾಂತರ ಜನರು ಏಕಕಾಲದಲ್ಲಿ ಧ್ಯಾನದಲ್ಲಿ ತೊಡಗುವ ಮೂಲಕ ಶಾಂತಿಯ ಸಂದೇಶ ಸಾರಲಿದ್ದಾರೆ.