Select Location
All Locations
State
Region
City / District
NEET UG 2026: ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ಪರೀಕ್ಷೆ ರದ್ದು, CBI ತನಿಖೆಗೆ ಆದೇಶ!

NEET UG 2026: ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ಪರೀಕ್ಷೆ ರದ್ದು, CBI ತನಿಖೆಗೆ ಆದೇಶ!

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ (NEET-UG) 2026 ಪರೀಕ್ಷಾ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಮೇಲ್ನೋಟಕ್ಕೆ ದೃಢಪಟ್ಟ ಹಿನ್ನೆಲೆಯಲ್ಲಿ ಮೇ 3ರಂದು ನಡೆದಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಜೊತೆಗೆ ಪರೀಕ್ಷೆಯನ್ನು ಮರು ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತೀರ್ಮಾನಿಸಿದೆ. ಸೋರಿಕೆಯಾದ ಪತ್ರಿಕೆ ಮ್ಯಾಚ್ ಆಗಿದ್ದೇಗೆ?: ಕಳೆದ ಮೇ 3ರಂದು ಪರೀಕ್ಷೆ ನಡೆಯುವ ಮೊದಲೇ ರಾಜಸ್ಥಾನದಲ್ಲಿ ಕೈಬರಹದ ಪ್ರಶ್ನೆ ಪತ್ರಿಕೆಯೊಂದು ಹರಿದಾಡುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (SOG) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಈ 'ಗೆಸ್ ಪೇಪರ್'ನಲ್ಲಿ ಇದ್ದ ಸುಮಾರು 150ಕ್ಕೂ ಹೆಚ್ಚು ಪ್ರಶ್ನೆಗಳು ಅಸಲಿ ಪತ್ರಿಕೆಯ ಪ್ರಶ್ನೆಗಳ ಜೊತೆ ತಾಳೆಯಾಗಿರುವುದು ಪತ್ತೆಯಾಗಿದೆ. ಜೈಪುರದಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣವಾಗುವ ಸಂದರ್ಭದಲ್ಲೇ ಸೋರಿಕೆಯಾಗಿರಬಹುದು ಎಂಬ ಶಂಕೆಯಿದ್ದು, ಕೋಚಿಂಗ್ ಸೆಂಟರ್ ಮತ್ತು ವಿದ್ಯಾರ್ಥಿಗಳ ಮೂಲಕ ಇದು ವ್ಯಾಪಕವಾಗಿ ಹಂಚಿಕೆಯಾಗಿದೆ ಎನ್ನಲಾಗಿದೆ.

ಸಿಬಿಐ ತನಿಖೆಗೆ ಆದೇಶ: ಈ ಹಗರಣದ ಆಳ ಮತ್ತು ವಿಸ್ತಾರವನ್ನು ಪರಿಗಣಿಸಿರುವ ಸರ್ಕಾರ, ಇಡೀ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (CBI) ವಶಕ್ಕೆ ಒಪ್ಪಿಸಿದೆ. ರಾಜಸ್ಥಾನ ಮಾತ್ರವಲ್ಲದೆ ಕೇರಳದಲ್ಲೂ ಪ್ರಶ್ನೆಗಳು ಮ್ಯಾಚ್ ಆಗಿರುವ ದೂರುಗಳು ಕೇಳಿಬಂದಿರುವುದು ಪ್ರಕರಣದ ಗಾಂಭೀರ್ಯವನ್ನು ಹೆಚ್ಚಿಸಿದೆ. ಈ ಸಂಬಂಧ ಎನ್‌ಟಿಎ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆ ಉಳಿಸಿಕೊಳ್ಳಲು ಪರೀಕ್ಷೆ ರದ್ದು ಅನಿವಾರ್ಯವಾಗಿತ್ತು ಎಂದು ಸ್ಪಷ್ಟಪಡಿಸಿದೆ. ಮರು ಪರೀಕ್ಷೆ ಯಾವಾಗ?: ರದ್ದಾಗಿರುವ ನೀಟ್ ಪರೀಕ್ಷೆಯನ್ನು ಶೀಘ್ರದಲ್ಲೇ ಮರು ನಡೆಸಲಾಗುವುದು ಮತ್ತು ಅದಕ್ಕೆ ಸಂಬಂಧಿಸಿದ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ. ಮರು ಪರೀಕ್ಷೆಗೆ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅಥವಾ ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಹಳೆಯ ನೋಂದಣಿ ವಿವರಗಳೇ ಚಾಲ್ತಿಯಲ್ಲಿರುತ್ತವೆ ಹಾಗೂ ಪ್ರವೇಶ ಪತ್ರಗಳನ್ನು (Admit Card) ಅಧಿಕೃತ ವೆಬ್‌ಸೈಟ್ ಮೂಲಕ ಮರು ವಿತರಿಸಲಾಗುವುದು. ವಿದ್ಯಾರ್ಥಿಗಳು ಮತ್ತು ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳಿಗೆ ಕಿವಿಗೊಡದೆ ಕೇವಲ ಅಧಿಕೃತ ಪ್ರಕಟಣೆಗಳನ್ನು ಮಾತ್ರ ನಂಬುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. 


Udayavani 56 minutes ago
Home Flash News