ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ: 7,500 ಪುಟಗಳ ಆರೋಪಪಟ್ಟಿ ಸಲ್ಲಿಸಿದ NIA
ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 7,500 ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ನವೆಂಬರ್ 10ರಂದು ವಾಹನ ಆಧಾರಿತ ಸ್ಫೋಟಕ ಸಾಧನ (ವಿಬಿಐಇಡಿ) ಸ್ಫೋಟದಲ್ಲಿ 11 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಡಾ.ಉಮರ್ ನಬಿ ಸೇರಿದಂತೆ 10 ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿದೆ.
ಎಲ್ಲ ಆರೋಪಿಗಳು ಅಲ್ ಖೈದಾ–ಭಾರತೀಯ ಉಪಖಂಡದ (ಎಕ್ಯೂಐಎಸ್) ಸಂಘಟನೆಯಾದ ಅನ್ಸಾರ್ ಗಜ್ವತ್–ಉಲ್–ಹಿಂದ್ (ಎಜಿಯುಎಚ್) ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ್ದರು ಎಂದು ಪ್ರಕಟಣೆ ತಿಳಿಸಿದೆ. ಆರೋಪಿಗಳಾದ ಅಮೀರ್ ರಶೀದ್ ಮಿರ್, ಜಾಸಿರ್ ಬಿಲಾಲ್ ವಾನಿ, ಡಾ. ಮುಜಾಮಿಲ್ ಶಕೀರ್, ಡಾ. ಅದಿಲ್ ಅಹ್ಮದ್ ರಾಥರ್, ಡಾ. ಶಾಹೀನ್ ಸಯೀದ್, ಮುಫ್ತಿ ಇರ್ಫಾನ್ ಅಹ್ಮದ್ ವಾಗೇ, ಸೋಯಬ್, ಡಾ. ಬಿಲಾಲ್ ನಸೀರ್ ಮಲ್ಲಾ ಮತ್ತು ಯಾಸಿರ್ ಅಹ್ಮದ್ ದರ್ ಹೆಸರುಗಳು ಚಾರ್ಜ್‌ಶೀಟ್‌ನಲ್ಲಿದೆ.