Select Location
All Locations
State
Region
City / District
Mumbai: ಜಂಟಿ ಪೊಲೀಸ್ ಕಮಿಷನರ್ ಆಗಿ ‘12th ಫೇಲ್’ ಖ್ಯಾತಿಯ ಮನೋಜ್ ಕುಮಾರ್ ಶರ್ಮಾ ನೇಮಕ

Mumbai: ಜಂಟಿ ಪೊಲೀಸ್ ಕಮಿಷನರ್ ಆಗಿ ‘12th ಫೇಲ್’ ಖ್ಯಾತಿಯ ಮನೋಜ್ ಕುಮಾರ್ ಶರ್ಮಾ ನೇಮಕ

ಮುಂಬೈ: ಮಹಾರಾಷ್ಟ್ರ ಸರ್ಕಾರವು ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಬದಲಾವಣೆ ಮಾಡಿದ್ದು, ಒಟ್ಟು 53 ಹಿರಿಯ ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮತ್ತು ಬಡ್ತಿ ನೀಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆಯಲ್ಲಿ ಅತ್ಯಂತ ಗಮನಾರ್ಹ ವಿಷಯವೆಂದರೆ, ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಪ್ರಸಿದ್ಧ ‘12th ಫೇಲ್’ (12th Fail) ಚಿತ್ರದ ನಿಜವಾದ ನಾಯಕ ಹಾಗೂ ಸ್ಫೂರ್ತಿಯಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರಿಗೆ ಮುಂಬೈ ಪೊಲೀಸ್ ಇಲಾಖೆಯ ಅತ್ಯಂತ ಪ್ರಮುಖ ಜವಾಬ್ದಾರಿಯನ್ನು ನೀಡಲಾಗಿದೆ. 2005ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಮನೋಜ್ ಕುಮಾರ್ ಶರ್ಮಾ ಅವರನ್ನು ಮುಂಬೈ ನಗರದ ಜಂಟಿ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ಆಗಿ ನೇಮಕ ಮಾಡಲಾಗಿದೆ. ಇದಕ್ಕೂ ಮುನ್ನ ಅವರು ಮಹಾರಾಷ್ಟ್ರ ರಾಜ್ಯದ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (IGP ) ಆಗಿ ಸೇವೆ ಸಲ್ಲಿಸುತ್ತಿದ್ದರು. 

ಈ ಹಿಂದೆ ಮುಂಬೈ ಜಂಟಿ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ಆಗಿದ್ದ ಸತ್ಯನಾರಾಯಣ ಚೌಧರಿ ಅವರನ್ನು ಜಂಟಿ ಪೊಲೀಸ್ ಕಮಿಷನರ್ (Traffic) ವಿಭಾಗಕ್ಕೆ ವರ್ಗಾಯಿಸಲಾಗಿದೆ. ಬಡತನ ಮತ್ತು ಕಠಿಣ ಸವಾಲುಗಳನ್ನು ಮೆಟ್ಟಿ ನಿಂತು, ಸತತ ಪ್ರಯತ್ನದ ಬಳಿಕ ತಮ್ಮ 4ನೇ ಯತ್ನದಲ್ಲಿ ಐಪಿಎಸ್ ಅಧಿಕಾರಿಯಾಗಿ ಯಶಸ್ವಿಯಾದ ಮನೋಜ್ ಕುಮಾರ್ ಶರ್ಮಾ ಅವರ ನಿಜ ಜೀವನದ ಕಥೆಯನ್ನು ಆಧರಿಸಿ '12th ಫೇಲ್' ಎಂಬ ಪುಸ್ತಕ ಮತ್ತು ಚಲನಚಿತ್ರವನ್ನು ನಿರ್ಮಿಸಲಾಗಿತ್ತು. ಈ ಚಿತ್ರವು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿತ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಆಡಳಿತಾತ್ಮಕ ದಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮಹಾರಾಷ್ಟ್ರ ಗೃಹ ಇಲಾಖೆಯು ಈ ಮಹತ್ವದ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡಿದೆ.


Udayavani 54 minutes ago
Home Flash News