ರವಿ ಮೋಹನ್ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಹಾಕಿ, ಚೆನ್ನೈ ತೊರೆದ ಗಾಯಕಿ ಕೆನಿಶಾ ಫ್ರಾನ್ಸಿಸ್.!
ಚೆನ್ನೈ: ಖ್ಯಾತ ನಟ ರವಿ ಮೋಹನ್ (Ravi Mohan) ಅವರೊಂದಿಗಿನ ಒಡನಾಟದ ಹಿನ್ನೆಲೆಯಲ್ಲಿ ತೀವ್ರ ಟೀಕೆ ಹಾಗೂ ಆನ್‌ಲೈನ್ ಟ್ರೋಲಿಂಗ್ ಎದುರಿಸುತ್ತಿದ್ದ ಗಾಯಕಿ ಮತ್ತು ಕೌನ್ಸಿಲರ್ ಕೆನಿಶಾ ಫ್ರಾನ್ಸಿಸ್ (Keneeshaa Francis), ಇದೀಗ ಸಾಮಾಜಿಕ ಜಾಲತಾಣಗಳಿಂದ ದೂರ ಸರಿಯುವುದಾಗಿ ಘೋಷಿಸಿದ್ದಾರೆ. ರವಿ ಮೋಹನ್ ಅವರಿಂದ ಸಂಪೂರ್ಣವಾಗಿ ದೂರವಾಗುತ್ತಿರುವುದಾಗಿ ತಿಳಿಸಿರುವ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಕುರಿತು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ನಿರಂತರ ಚರ್ಚೆಗಳು ಮತ್ತು ನಿಂದನೆಗಳಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿರುವುದಾಗಿ ಕೆನಿಶಾ ಹೇಳಿದ್ದಾರೆ.
"ನಾನು ಹೇಳಬಾರದ್ದನ್ನು ಮತ್ತು ಹೇಳಬಹುದಾದದ್ದಕ್ಕಿಂತ ಹೆಚ್ಚಿನದನ್ನು ಈಗಾಗಲೇ ಹೇಳಿದ್ದೇನೆ. ನಾನು ಈ ಕಥೆಯೊಳಗೆ ಪ್ರೀತಿಯಿಂದ ಹೆಜ್ಜೆ ಇಟ್ಟಿದ್ದೆ, ಆದರೆ ಈಗ ಮೌನವಾಗಿ ಹೊರನಡೆಯುತ್ತಿದ್ದೇನೆ. ಕೆಲವು ಜಾಗಗಳು ಅಹಂಕಾರ, ತೀರ್ಪುಗಳು ಮತ್ತು ಸೃಷ್ಟಿಮಾಡಿದ ಕಥೆಗಳಿಂದ ತುಂಬಿಹೋಗಿರುತ್ತವೆ. ಅಲ್ಲಿ ಒಳ್ಳೆಯತನಕ್ಕೆ ಉಸಿರಾಡಲು ಜಾಗವಿರುವುದಿಲ್ಲ. ಪ್ರಪಂಚವು ಈಗಾಗಲೇ ಕೆಟ್ಟದಾಗಿ ಬಿಂಬಿಸಿರುವ ವ್ಯಕ್ತಿಯೊಬ್ಬರನ್ನು ರಕ್ಷಿಸಲು ನಾನು ನನ್ನ ಸರ್ವಸ್ವವನ್ನೂ ನೀಡಿದೆ. ಆದರೆ ಸೋಗಿನ ಈ ಜಗತ್ತಿನಲ್ಲಿ, ಗದ್ದಲದ ಮುಂದೆ ದಯೆಗೆ ಸ್ಥಾನವಿಲ್ಲ ಎಂಬುದು ಈಗ ನನಗೆ ಸ್ಪಷ್ಟವಾಗಿ ಅರ್ಥವಾಗಿದೆ" ಎಂದು ಕೆನಿಶಾ ಬರೆದುಕೊಂಡಿದ್ದಾರೆ.