Select Location
All Locations
State
Region
City / District
ಮಂಗಳೂರಲ್ಲಿ ಒಎನ್‌ಜಿಸಿ ತೈಲ ಸಂಗ್ರಹಾಗಾರ

ಮಂಗಳೂರಲ್ಲಿ ಒಎನ್‌ಜಿಸಿ ತೈಲ ಸಂಗ್ರಹಾಗಾರ

ನವದೆಹಲಿ : ಒಂದು ಕಡೆ ಇರಾನ್‌-ಅಮೆರಿಕ ಸಮರದ ಕಾರಣ ದೇಶದಲ್ಲಿ ತೈಲ ತತ್ವಾರ ಉಂಟಾದ ಬೆನ್ನಲ್ಲೇ ದೇಶದಲ್ಲಿ ಹೆಚ್ಚಿನ ತೈಲ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಹಾಗೂ ನೈಸರ್ಗಿಕ ಅನಿಲ ನಿಗಮ, ಮಂಗಳೂರಿನಲ್ಲಿ 17.5 ಲಕ್ಷ ಮೆಟ್ರಿಕ್‌ ಟನ್‌ ಸಾಮರ್ಥ್ಯದ ವ್ಯೂಹಾತ್ಮಕ ಪೆಟ್ರೋಲಿಯಂ ಸಂಗ್ರಹಾಗಾರ ಸ್ಥಾಪಿಸುವ ಯೋಜನೆಗೆ ತಾತ್ವಿಕ ಅನುಮೋದನೆ ನೀಡಿದೆ.

ಒಎನ್‌ಜಿಸಿಯ ಅಂಗಸಂಸ್ಥೆ ಎಆರ್‌ಪಿಎಲ್ ಮಂಗಳೂರಲ್ಲಿ ಈಗಾಗಲೇ ತೈಲಾಗಾರ ಹೊಂದಿದೆ. ಈಗ ಒಎನ್‌ಜಿಸಿ ಖುದ್ದು ತೈಲಾಗಾರ ಸ್ಥಾಪನೆಗೆ ಮುಂದಾಗಿದ್ದು, ಇದು ಮಂಗಳೂರಿನ 2ನೇ ಯೋಜನೆ ಆಗಲಿದೆ. ಉಡುಪಿಯ ಪಾದೂರಲ್ಲೂ ಒಂದು ತೈಲಾಗಾರವಿದೆ.

ಒಎನ್‌ಜಿಸಿ ಕ್ರಮ: ಮಂಗಳೂರು ವ್ಯೂಹಾತ್ಮಕ ಪೆಟ್ರೋಲಿಯಂ ಸಂಗ್ರಹಗಾರದ ಒಂದು ಹಂತದ ವಿಸ್ತರಣೆಯ ಭಾಗವಾಗಿ ಹೊಸ ತೈಲಾಗಾರ ಸಿದ್ಧಪಡಿಸಲು ಒಎನ್‌ಜಿಸಿ ನಿರ್ಧರಿಸಿದೆ ಎಂದು ಷೇರುಪೇಟೆಗೆ ಕಂಪನಿ ಮಾಹಿತಿ ನೀಡಿದೆ.

ಒಎನ್‌ಜಿಸಿ ನಿರ್ದೇಶಕರ ಮಂಡಳಿಯು ಈ ಸಂಗ್ರಹಾಗಾರವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಕುರಿತು ಕೇಂದ್ರ ಸರ್ಕಾರದ ಜತೆಗೆ ಮಾತುಕತೆ ನಡೆಸಲು ಕಂಪನಿಗೆ ಅನುಮತಿ ನೀಡಿದೆ. ಈ ತೈಲಾಗಾರ ನಿರ್ಮಾಣಕ್ಕೆ 15 ಸಾವಿರ ಕೋಟಿ ರು. ವೆಚ್ಚ ತಗಲುವ ನಿರೀಕ್ಷೆ ಇದೆ. ತುರ್ತು ಪರಿಸ್ಥಿತಿ ವೇಳೆ ಇಂಧನ ಭದ್ರತೆ ಖಚಿತಪಡಿಸಲು ಭಾರತವು ವ್ಯೂಹಾತ್ಮಕ ತೈಲ ಸಂಗ್ರಹಾಗಾರ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ದೈನಂದಿನ ಬಳಕೆ ಹೊರತಾಗಿ ತುರ್ತು ಪರಿಸ್ಥಿತಿ ಅಥವಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಕೊರತೆ ಉಂಟಾಗುವ ಸಂದರ್ಭಕ್ಕೋಸ್ಕರವೇ ಈ ತೈಲಸಂಗ್ರಹಾಗಾರಗಳಲ್ಲಿ ತೈಲ ಸಂಗ್ರಹಿಸಿಡುವ ಯೋಜನೆ ಇದಾಗಿದೆ.

5.33 ದಶಲಕ್ಷ ಟನ್‌ ಸಾಮರ್ಥ್ಯದ ತೈಲ ಸಂಗ್ರಹಾಗಾರ ಈ ಕಾರ್ಯಕ್ರಮದಡಿ ಮೊದಲ ಹಂತದಲ್ಲಿ ಆಂಧ್ರದ ವಿಶಾಖಪಟ್ಟಣ, ಮಂಗಳೂರು ಹಾಗೂ ಉಡುಪಿ ಬಳಿಯ ಪಾದೂರಿನಲ್ಲಿ ಒಟ್ಟು 5.33 ದಶಲಕ್ಷ ಟನ್‌ ಸಾಮರ್ಥ್ಯದ ತೈಲ ಸಂಗ್ರಹಾಗಾರ ಸ್ಥಾಪಿಸಲಾಗಿದೆ. ಎರಡನೇ ಹಂತದಲ್ಲಿ ಪಾದೂರು ಘಟಕದ ವಿಸ್ತರಣೆ, ಅಭಿವೃದ್ಧಿ ಮತ್ತು ಒಡಿಶಾದ ಚಂಡಿಖೋಲ್‌ನಲ್ಲಿ ಹೊಸದಾಗಿ ಸಂಗ್ರಹಾಗಾರ ಸ್ಥಾಪನೆಗೂ ಸರ್ಕಾರ ಅನುಮತಿ ನೀಡಿತ್ತು


Kannadapraba 1 day ago
Home Flash News