ಇರಾನ್‌ನೊಂದಿಗೆ ಎಲ್ಲ ವಾಣಿಜ್ಯ, ಹಣಕಾಸು ವಹಿವಾಟು ಸ್ಥಗಿತಗೊಳಿಸಿದ ಯುಎಇ
ದುಬೈ:ಇರಾನ್‌ನೊಂದಿಗೆ ಎಲ್ಲ ರೀತಿಯ ವ್ಯಾಪಾರ, ವಾಣಿಜ್ಯ ವಿನಿಮಯ ಹಾಗೂ ಹಣಕಾಸು ವಹಿವಾಟುಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿರುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಘೋಷಿಸಿದೆ. ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡುವುದು ಹಾಗೂ ಅಂತಾರಾಷ್ಟ್ರೀಯ ಕಾನೂನು ಮತ್ತು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸಮಗ್ರತೆಯನ್ನು ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯದ ಸಂವಹನ ವಿಭಾಗದ ನಿರ್ದೇಶಕಿ ಅಫ್ರಾ ಅಲ್ ಹಮೇಲಿ ತಿಳಿಸಿದ್ದಾರೆ. ಇರಾನ್‌ನಿಂದ ಕ್ಷಿಪಣಿ ಉಡಾವಣೆ ಇರಾನ್‌ನಿಂದ ಗಲ್ಫ್ ಪ್ರದೇಶದತ್ತ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಲಾಗಿದ್ದು, ಅವುಗಳನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಪತ್ತೆಹಚ್ಚಿವೆ ಎಂದು ಯುಎಇ ತಿಳಿಸಿದ ಬೆನ್ನಲ್ಲೇ ಈ ನಿರ್ಧಾರ ಪ್ರಕಟಿಸಲಾಗಿದೆ.ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯ ಹಿನ್ನೆಲೆಯಲ್ಲಿ ಯುಎಇ ಕೈಗೊಂಡಿರುವ ಈ ಕ್ರಮ ಮಹತ್ವ ಪಡೆದುಕೊಂಡಿದೆ.
ಯುಎಇ ಆರೋಪ ತಳ್ಳಿಹಾಕಿದ ಇರಾನ್ ಗಲ್ಫ್ ರಾಷ್ಟ್ರ ಯುಎಇಯತ್ತ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂಬ ಆರೋಪವನ್ನು ಇರಾನ್ ‘ಸಂಪೂರ್ಣವಾಗಿ ತಳ್ಳಿಹಾಕಿದೆ’. ಯುಎಇ ಮಾಡಿರುವ ಆರೋಪ ಆಧಾರರಹಿತವಾಗಿದ್ದು, ಪ್ರಾದೇಶಿಕ ನಂಬಿಕೆ ಹಾಗೂ ಭದ್ರತಾ ಪ್ರಯತ್ನಗಳಿಗೆ ಧಕ್ಕೆ ತರುತ್ತದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿದೆ. ‘ಉತ್ತಮ ನೆರೆಹೊರೆಯ ಸಂಬಂಧ’ದ ತತ್ವದಡಿ ಇಂತಹ ಆಧಾರರಹಿತ ಆರೋಪಗಳನ್ನು ಮಾಡದಿರುವುದು ಅಗತ್ಯ ಎಂದು ಇರಾನ್ ತಿಳಿಸಿದೆ. ಇದೇ ವೇಳೆ, ಗಲ್ಫ್‌ನಿಂದ ಹೊರಹೋಗುವ ಹಡಗುಗಳು ಸಂಚರಿಸಬೇಕಾದ ಪ್ರಮುಖ ಜಲಮಾರ್ಗವಾದ ಹೊರ್ಮುಜ್ ಜಲಸಂಧಿ ಸದ್ಯಕ್ಕೆ ಮುಚ್ಚಿಯೇ ಇರಲಿದೆ ಎಂದು ಇರಾನ್ ಎಚ್ಚರಿಸಿದೆ. ಅಮೆರಿಕದೊಂದಿಗೆ ಶಾಂತಿ ಒಪ್ಪಂದಕ್ಕೆ ಬರಲಿರುವವರೆಗೆ ಹೊರ್ಮುಜ್ ಜಲಸಂಧಿ ತೆರೆಯುವುದಿಲ್ಲ ಎಂದು ತಿಳಿಸಿದೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ ಹೇಳಿಕೆಯಲ್ಲಿ, ಯುಎಇ ಮಾಡಿರುವ ಕ್ಷಿಪಣಿ ದಾಳಿ ಆರೋಪವನ್ನು ಇರಾನ್ ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ತಿಳಿಸಿದ್ದಾರೆ. ಇಂತಹ ಆರೋಪಗಳು ಪ್ರಾದೇಶಿಕ ಶಾಂತಿ ಬಲಪಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತವೆ. ಜತೆಗೆ, ನೆರೆ ರಾಷ್ಟ್ರಗಳ ನಡುವಿನ ಪರಸ್ಪರ ನಂಬಿಕೆ ವೃದ್ಧಿಸುವ ಮತ್ತು ಪ್ರದೇಶದಲ್ಲಿ ಅಸ್ಥಿರತೆ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುವ ಪ್ರಯತ್ನಗಳಿಗೂ ಇವು ಧಕ್ಕೆ ತರುತ್ತವೆ ಎಂದು ಬಘಾಯಿ ಹೇಳಿದ್ದಾರೆ. ಹೊರ್ಮುಜ್ ಜಲಸಂಧಿಯ ಮೂಲಕವೇ ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳ ಬಂದರುಗಳಿಂದ ಹೊರಡುವ ಬಹುತೇಕ ಹಡಗುಗಳು ಅಂತಾರಾಷ್ಟ್ರೀಯ ಜಲಪ್ರದೇಶಕ್ಕೆ ತೆರಳಬೇಕಿರುವುದರಿಂದ, ಇರಾನ್‌ನ ಈ ಎಚ್ಚರಿಕೆ ಜಾಗತಿಕ ಸಾಗಣೆ ಮತ್ತು ಪ್ರಾದೇಶಿಕ ಭದ್ರತೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.