Select Location
All Locations
State
Region
City / District
ಎಸ್ಐಆರ್‌ ಕರಡು: 1 ಕೋಟಿ ಮತದಾರರು ಹೊರಕ್ಕೆ

ಎಸ್ಐಆರ್‌ ಕರಡು: 1 ಕೋಟಿ ಮತದಾರರು ಹೊರಕ್ಕೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ‘ (ಎಸ್ಐಆರ್) ‘ಗಣತಿ’ ಹಂತ ಮುಗಿದಿದ್ದು, 4.46 ಕೋಟಿ ಮತದಾರರ ಕರಡು ಪಟ್ಟಿಯನ್ನು ಸೋಮವಾರ ಚುನಾವಣಾ ಆಯೋಗ ಪ್ರಕಟಿಸಿದೆ. ನಿರೀಕ್ಷೆಯಂತೆ 1.07 ಕೋಟಿ (ಶೇ.19.48) ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಇದರ ಬೆನ್ನಲ್ಲೇ ನಿನ್ನೆಯಿಂದಲೇ ಅಂದರೆ, ಆ.24ರಿಂದ 43.81 ಲಕ್ಷ ಮತದಾರರಿಗೆ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆ ಸಹ ಆರಂಭವಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ 2026 ಜೂನ್ 30ರಿಂದ ಆಗಸ್ಟ್ 17ರವರೆಗೆ ನಡೆದ ಬಿಎಲ್ಒಗಳ ಮನೆ-ಮನೆ ಭೇಟಿ, ಗಣತಿ ನಮೂನೆಗಳ ವಿತರಣೆ, ಅವುಗಳನ್ನು ವಾಪಸ್ ಪಡೆದುಕೊಳ್ಳುವ ಸುದೀರ್ಘ 49 ದಿನಗಳ ಪ್ರಕ್ರಿಯೆ ಬಳಿಕ ಅಂತಿಮವಾಗಿ ಆಗಸ್ಟ್ 24ರಂದು ರಾಜ್ಯದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು 2.21 ಕೋಟಿ ಪುರುಷರು, 2.24 ಕೋಟಿ ಮಹಿಳೆಯರು, 44 ಸಾವಿರ ಸೇವಾ ಮತದಾರರು (ಸರ್ವಿಸ್ ವೋಟರ್ಸ್), 2,871 ತೃತೀಯ ಲಿಂಗಿ ಸೇರಿ ಒಟ್ಟು 4.46 ಕೋಟಿ ಮತದಾರರು ಇದ್ದಾರೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದರು. 

ಗಣತಿ ನಮೂನೆ ಭರ್ತಿ ಮಾಡಿ ಕೊಟ್ಟಿರುವ ವಿವರಗಳಲ್ಲಿ ಲೋಪಗಳು (ಅನಾಮಲೀಸ್) ಕಂಡು ಬಂದಿರುವ 20.35 ಲಕ್ಷ ಹಾಗೂ 2002ರ ಮತದಾರರ ಪಟ್ಟಿಯ ಮಾಹಿತಿ ನೀಡದ (ನೋ ಮ್ಯಾಪಿಂಗ್) 23.45 ಲಕ್ಷ ಸೇರಿ ಒಟ್ಟು 43.81 ಲಕ್ಷ ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆ.24ರಿಂದಲೇ ಆರಂಭವಾಗಿದೆ. ಎಲ್ಲ ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳುವಂತೆ ಮನವಿ ಮಾಡಿದರು. ಒಟ್ಟು ಮತದಾರರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಅತಿ ಹೆಚ್ಚು ಬೆಳಗಾವಿ ಜಿಲ್ಲೆಯಲ್ಲಿ 35.93 ಲಕ್ಷ, ಬೆಂಗಳೂರು ನಗರ ಜಿಲ್ಲೆಯಲ್ಲಿ 23.03 ಲಕ್ಷ ಮತದಾರರು ಇದ್ದರೆ, ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ 4.05 ಲಕ್ಷ ಮತದಾರರು ಇದ್ದಾರೆ. ಒಟ್ಟು ಮತದಾರರು ಹೆಚ್ಚಿರುವ ಪರಿಣಾಮ ಯುವ ಮತದಾರರು, ಅಂಗವಿಕಲ ಮತದಾರರು, 85 ವರ್ಷ ಮೇಲ್ಪಟ್ಟ ಮತದಾರರು, ಸೇವಾ ಮತದಾರರು ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 136 ಅತಿ ಹೆಚ್ಚು ಎನ್ ಆರ್ ಐ ಮತದಾರರು ಇದ್ದಾರೆ. 

ಯಾರಿಗೆಲ್ಲ ನೋಟಿಸ್?: ಗಣತಿ ನಮೂನೆ ಭರ್ತಿ ಮಾಡಿ ಕೊಟ್ಟಿರುವ ವಿವರಗಳಲ್ಲಿ ಲೋಪಗಳು (ಅನಾಮಲೀಸ್) ಕಂಡು ಬಂದಿರುವ 20.35 ಲಕ್ಷ ಹಾಗೂ 2002ರ ಮತದಾರರ ಪಟ್ಟಿಯ ಮಾಹಿತಿ ನೀಡದ (ನೋ ಮ್ಯಾಪಿಂಗ್) 23.45 ಲಕ್ಷ ಸೇರಿ ಒಟ್ಟು 43.81 ಲಕ್ಷ ಮತದಾರರಿಗೆ ನೋಟಿಸ್ ಹೋಗುವುದು ಪಕ್ಕಾ. ಇದರ ಜೊತೆಗೆ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರ ಪೈಕಿ ಯಾರಾದರೂ ಮತದಾರರ ದಾಖಲೆಗಳ ಬಗ್ಗೆ ಅನುಮಾನ ಬಂದರೆ ಅಥವಾ ಯಾರಾದರೂ ದೂರು ಕೊಟ್ಟಲ್ಲಿ ಮತದಾರರ ನೋಂದಣಿ ಅಧಿಕಾರಿ (ಇಆರ್ ಒ) ನೋಟಿಸ್ ಜಾರಿಗೊಳಿಸಬಹುದು ಎಂದು ರಾ‍ಜ್ಯ ಮುಖ್ಯ ಚುನಾವಣಾಧಿಕಾರಿ ಇದೇ ವೇಳೆ ತಿಳಿಸಿದರು. 3926 ಹೆಚ್ಚುವರಿ ಇಆರ್ ಒ ನೇಮಕ: ನೋಟಿಸ್ ಗಳ ವಿಚಾರಣೆ ಮತ್ತು ತ್ವರಿತ ವಿಲೇವಾರಿಗೆ 224 ಇಆರ್‌ಒ ಮತ್ತು 332 ಸಹಾಯಕ ಇಆರ್‌ಒಗಳ ಹೊರತಾಗಿ 3926 ಹೆಚ್ಚುವರಿ ಇಆರ್‌ಒಗಳನ್ನು ನೇಮಕ ಮಾಡಲಾಗಿದೆ. 

ಇವರಿಗೆ 2 ಸುತ್ತು ತರಬೇತಿ ಸಹ ನೀಡಲಾಗಿದೆ. ಒಂದೆರಡು ದಿನಗಳಲ್ಲಿ ಇವರ ನಿಯೋಜನೆ ಆದೇಶ ಹೊರಬೀಳಲಿದೆ. ಒಬ್ಬರ ಇಆರ್‌ಒ, ಎಎಆರ್‌ಒಗೆ ಸರಾಸರಿ ಸಾವಿರ ನೋಟಿಸ್ ಬರಲಿದೆ. ಒಂದು ದಿನದಲ್ಲಿ ಒಬ್ಬ ಅಧಿಕಾರಿ 150 ನೋಟಿಸ್ ವಿಲೇವಾರಿ ಮಾಡಬೇಕು ಎಂದು ವಿವರಿಸಿದರು. 25 ಜಿಲ್ಲೆಗಳಲ್ಲಿ ಮಹಿಳಾ ಮತದಾರರೇ ಹೆಚ್ಚು: ಬಿಬಿಎಂಪಿ (ಜಿಬಿಎ) ವ್ಯಾಪ್ತಿಯ ಮೂರು ಚುನಾವಣಾ ಜಿಲ್ಲೆಗಳು ಸೇರಿ ಚುನಾವಣಾ ಆಯೋಗ ಗುರುತಿಸಿರುವ ರಾಜ್ಯದ 34 ಜಿಲ್ಲೆಗಳ ಪೈಕಿ 25 ಜಿಲ್ಲೆಗಳಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಬಿಬಿಎಂಪಿ ಕೇಂದ್ರ, ಬಿಬಿಎಂಪಿ ಉತ್ತರ, ಬಿಬಿಎಂಪಿ ದಕ್ಷಿಣ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಶೇ.19.48 ಮತದಾರರು ಹೊರಕ್ಕೆ ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು ಒಟ್ಟು 5.54 ಕೋಟಿ ಮತದಾರರ ಪೈಕಿ 4.46 ಕೋಟಿ ಮತದಾರರಷ್ಟೇ ಕರಡು ಪಟ್ಟಿಯಲ್ಲಿ ಇದ್ದಾರೆ. ನಿರೀಕ್ಷೆಯಂತೆ 1.07 ಕೋಟಿ (ಶೇ.19.48) ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಒಟ್ಟು 1.07 ಕೋಟಿ ಮತದಾರರನ್ನು ಎಎಸ್‌ಡಿಡಿಒ (ಗೈರು, ಸ್ಥಳಾಂತರ, ನಿಧನ, ನಕಲಿ ಹಾಗೂ ಇತರರು) ಎಂದು ಗುರುತಿಸಲಾಗಿದೆ. ಇದರಲ್ಲಿ ಗೈರು 15.17 ಲಕ್ಷ, ಶಾಶ್ವತ ಸ್ಥಳಾಂತರ 65.45, ಲಕ್ಷ, ನಿಧನ 16.39 ಲಕ್ಷ, ನಕಲಿ 7.09 ಲಕ್ಷ, ಇತರ 2.83 ಲಕ್ಷ ಇದ್ದಾರೆ. ನಿಧನ ಮತ್ತು ನಕಲಿ ಹೊರತುಪಡಿಸಿ, ಗೈರು, ಸ್ಥಳಾಂತರ ಮತ್ತು ಇತರೆ (ಸಹಿ ಮಾಡಲು ನಿರಾಕರಿಸಿದ) ಮತದಾರರು ಈಗಲೂ ಫಾರಂ 6 ಭರ್ತಿ ಮಾಡಿ ಕೊಡಬಹುದು.


Udayavani 42 minutes ago
Home Flash News