Select Location
All Locations
State
Region
City / District
ಜಿ ರಾಮ್‌ ಜಿ ಮಾನವ ದಿನ: ಬೆಳಗಾವಿಗೇ ಹೆಚ್ಚು

ಜಿ ರಾಮ್‌ ಜಿ ಮಾನವ ದಿನ: ಬೆಳಗಾವಿಗೇ ಹೆಚ್ಚು

ಹುಬ್ಬಳ್ಳಿ: ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ (ವಿಬಿ ಜಿ ರಾಮ್ ಜಿ ) ಯೋಜನೆಯಡಿ 2026-27ನೇ ಸಾಲಿಗೆ ರಾಜ್ಯದಲ್ಲಿ ಒಟ್ಟು 9,429.12 ಕೋಟಿ ರೂ.ಗಳ ಅನುದಾನದೊಂದಿಗೆ 13.71 ಕೋಟಿ ಮಾನವ ದಿನಗಳು ಸೃಜಿಸಬಹುದಾಗಿದೆ. ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ಮಾನವ ದಿನಗಳನ್ನು ಪಡೆದಿದ್ದರೆ, ಬೆಂಗಳೂರು ಕೊನೇ ಸ್ಥಾನದಲ್ಲಿದೆ. ವಿಬಿ ಜಿ ರಾಮ್ ಜಿ ಯೋಜನೆ ಘೋಷಣೆ ಆರಂಭಕ್ಕೆ ಎದ್ದಿದ್ದ ವಿವಾದ, ವಿಘ್ನಗಳು ನಿವಾರಣೆಯಾಗಿದ್ದು, ಈಗ ಯೋಜನೆಯ ರೂಪುರೇಷೆ-ನಿಯಮಗಳ ಅನುಷ್ಠಾನ ಸ್ಪಷ್ಟ ರೂಪ ಪಡೆದಿದೆ. ಯೋಜನೆ ಅಡಿ ಗ್ರಾಮೀಣ ಜನರಿಗೆ ವರ್ಷಕ್ಕೆ ಸುಮಾರು 125 ದಿನಗಳ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ 2026-27ನೇ ಸಾಲಿಗೆ ರಾಜ್ಯಕ್ಕೆ ಕೇಂದ್ರ ಸರ್ಕಾರ 5,709.90 ಕೋಟಿ ರೂ.

ನೀಡಿದರೆ, ರಾಜ್ಯ ಸರ್ಕಾರ ತನ್ನ ಪಾಲು 3,771.65 ಕೋಟಿ ರೂ. ನೀಡಬೇಕಿದ್ದು, ಒಟ್ಟು 9,429.12 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನ ಗೊಳ್ಳಬೇಕಿದೆ. ನಿತ್ಯ 382 ರೂ.ಗಳ ಕೂಲಿ ನಿಗದಿಯಂತೆ ರಾಜ್ಯದಲ್ಲಿ 9,429.12 ಕೋಟಿ ರೂ. ವೆಚ್ಚದಲ್ಲಿ 13.71 ಕೋಟಿ ಮಾನವ ದಿನಗಳನ್ನು ಸೃಜಿಸಬಹುದಾಗಿದೆ. ಕಳೆದ 5 ವರ್ಷಗಳಲ್ಲಿ ಸೃಜಿಸಿದ ಮಾನವ ದಿನಗಳ ಸರಾಸರಿ ಪರಿಗಣಿಸಿ ಜಿ ರಾಮ್ ಜಿ ಯೋಜನೆಯಡಿ 2026ರ ಜುಲೈನಿಂದ 2027ರ ಮಾರ್ಚ್‌ವರೆಗೆ ಜಿಲ್ಲಾವಾರು ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಜಿಲ್ಲೆಗೆ ಹಂಚಿಕೆಯಾಗಿರುವ ಮಾನವ ದಿನಗಳನ್ನು ಗ್ರಾಪಂವಾರು ನಿಗದಿಪಡಿಸಲು ಸೂಚಿಸಲಾಗಿದೆ. ಬೆಳಗಾವಿ ಜಿಲ್ಲೆ ಮೊದಲು: ಯೋಜನೆ ಅಡಿ 2026-27ನೇ ಸಾಲಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 233.12 ಲಕ್ಷ ಪರಿಶಿಷ್ಟ ಜಾತಿಯವರಿಗೆ, 95.99 ಲಕ್ಷ ಪರಿಶಿಷ್ಟ ಪಂಗಡದವರಿಗೆ, 1,042.18 ಲಕ್ಷ ಇತರೆ ಸಮಾಜಗಳಿಗೆ ಸೇರಿದಂತೆ ಒಟ್ಟು 1,371.29 ಲಕ್ಷ ಮಾನವ ದಿನಗಳನ್ನು ಸೃಜಿಸಲು ಯೋಜಿಸಲಾಗಿದೆ. 

ಮಾನವ ದಿನಗಳ ಸೃಜಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ನಂತರದ ಐದು ಸ್ಥಾನಗಳಲ್ಲಿ ರಾಯಚೂರು, ಕೊಪ್ಪಳ, ಕಲಬುರಗಿ, ತುಮಕೂರು ಜಿಲ್ಲೆಗಳು ಇದ್ದು, ಬೆಂಗಳೂರು ಜಿಲ್ಲೆ ಕೊನೇ ಸ್ಥಾನದಲ್ಲಿದೆ. ಬೆಳಗಾವಿ ಜಿಲ್ಲೆಗೆ ಒಟ್ಟು 126.55 ಲಕ್ಷ ಮಾನವ ದಿನಗಳನ್ನು ಸೃಜಿಸಲು, ರಾಯಚೂರು ಜಿಲ್ಲೆಗೆ 115.47 ಲಕ್ಷ ಮಾನವ ದಿನಗಳನ್ನು ಸೃಜಿಸುವ ಅವಕಾಶ ಕಲ್ಪಿಸಲಾಗಿದೆ. ಕೊಪ್ಪಳ ಜಿಲ್ಲೆಗೆ 89.26 ಲಕ್ಷ , ಕಲಬುರಗಿ ಜಿಲ್ಲೆಗೆ 66.57 ಲಕ್ಷ , ತುಮಕೂರು ಜಿಲ್ಲೆಗೆ 65.65 ಲಕ್ಷ ಮಾನವ ದಿನಗಳನ್ನು ಸೃಜಿಸಬಹುದಾಗಿದ್ದು, ಬೆಂಗಳೂರು ಜಿಲ್ಲೆ 0.83 ಲಕ್ಷ (83 ಸಾವಿರ) ಮಾನವ ದಿನಗಳ ಸೃಜಿಸುವ ಅವಕಾಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. 


Udayavani 38 minutes ago
Home Flash News