Select Location
All Locations
State
Region
City / District
15 ದಿನ ನಿತ್ಯ 9000 ಕ್ಯೂಸೆಕ್‌ ನೀರು ಬಿಡಿ: ಕರ್ನಾಟಕಕ್ಕೆ ಕಾವೇರಿ ಸಮಿತಿ

15 ದಿನ ನಿತ್ಯ 9000 ಕ್ಯೂಸೆಕ್‌ ನೀರು ಬಿಡಿ: ಕರ್ನಾಟಕಕ್ಕೆ ಕಾವೇರಿ ಸಮಿತಿ

ನವದೆಹಲಿ: ಆ.25ರಿಂದ 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 9000 ಕ್ಯೂಸೆಕ್‌ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣಾ ಸಮಿತಿ (ಸಿಡಬ್ಲ್ಯುಆರ್‌ಸಿ) ಆದೇಶಿಸಿದೆ. ಅಲ್ಲದೆ ಇಷ್ಟು ನೀರು ಹರಿದುಹೋಗುತ್ತಿರುವನ್ನು ಬಿಳಿಗುಂಡ್ಲು ಬಳಿ ಖಚಿತಪಡಿಸುವುದು ಕರ್ನಾಟಕದ ಜವಾಬ್ದಾರಿ ಎಂದು ಹೇಳಿದೆ. ಇದರೊಂದಿಗೆ ಮತ್ತೆ ಕರ್ನಾಟಕಕ್ಕೆ ಕಾವೇರಿ ಬರೆ ಬಿದ್ದಿದೆ. ಸಿಡಬ್ಲ್ಯುಆರ್‌ಸಿಯ 141ನೇ ಸಭೆಯಲ್ಲಿ ಕರ್ನಾಟಕದ ವಾದವನ್ನು ಪರಿಗಣಿಸದ ಸಂಸ್ಥೆ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿದೆ ಎಂಬ ತಮಿಳುನಾಡು ವಾದವನ್ನು ಪರಿಗಣಿಸಿ ಒಟ್ಟಾರೆ 11.66 ಟಿಎಂಸಿ ನೀರು ಬಿಡುಗಡೆ ಮಾಡಲು ಸೂಚಿಸಿದೆ. ಇದಕ್ಕೂ ಹಿಂದೆ ನಡೆದ ಸಭೆಯಲ್ಲಿ ನಿತ್ಯ 12000 ಕ್ಯೂಸೆಕ್‌ ನೀರು ಬಿಡಲು ಆದೇಶಿಸಿತ್ತು. ಕರ್ನಾಟಕದ ವಾದವೇನು? ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣ 30 ವರ್ಷಗಳ ಸರಾಸರಿಗಿಂತ ಶೇ.49.18ರಷ್ಟು ಕಡಿಮೆ ಇದೆ. 

ಅಲ್ಲದೆ 4 ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣ 77048 ಕ್ಯೂಸೆಕ್‌ನಿಂದ 9282 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಹೀಗಾಗಿ 12000 ಕ್ಯೂಸೆಕ್‌ ನೀರನ್ನು ನಿತ್ಯ ಬಿಡುವುದು ಸಾಧ್ಯವಿಲ್ಲ. ಇದರ ಪ್ರಮಾಣವನ್ನು 6000 ಕ್ಯೂಸೆಕ್‌ಗೆ ಇಳಿಸಬೇಕು ಎಂದು ಮನವಿ ಮಾಡಿತ್ತು. ಅಲ್ಲದೆ ಜು.29ರಿಂದ ಆ.23ರವರೆಗೆ ಸಮಿತಿಯ ಆದೇಶದಂತೆ 1.84 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ 2.16 ಲಕ್ಷ ಕ್ಯೂಸೆಕ್‌ ನೀರನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದರೆ ರಾಜ್ಯದಲ್ಲಿ ಕೃಷಿಗೆ ತೊಂದರೆಯಾಗಲಿದೆ ಎಂದು ಹೇಳಿತು. ತಮಿಳುನಾಡಿನ ವಾದವೇನು? ಸಭೆಯಲ್ಲಿ ಮಾತನಾಡಿದ ತಮಿಳುನಾಡು, ರಾಜ್ಯದ ಪಾಲಿನ ನೀರನ್ನು ಬಿಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿತು. ಆ.23ರವರೆಗೆ 17.49 ಟಿಎಂಸಿ ನೀರಿನ ಕೊರತೆಯನ್ನು ತಮಿಳುನಾಡು ಎದುರಿಸುತ್ತಿದೆ. ಇದನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿತು. ಜತೆಗೆ ಆ.24ರಿಂದ ಸೆ.7ರವರೆಗೆ ಒಟ್ಟು 28.38 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಹೀಗಾದಲ್ಲಿ ಮಾತ್ರ ಕೊರತೆಯನ್ನು ನೀಗಿಸಬಹುದು ಎಂದು ಹೇಳಿತು.


Udayavani 41 minutes ago
Home Flash News