ಸಚಿವ ಡಿ. ಸುಧಾಕರ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಕಂಬನಿ..
ಚಿತ್ರದುರ್ಗ: ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ (D. Sudhakar) ಅವರ ಅಕಾಲಿಕ ನಿಧನದಿಂದ ಕೋಟೆ ನಾಡು ಚಿತ್ರದುರ್ಗ ಹಾಗೂ ರಾಜ್ಯ ರಾಜಕಾರಣದಲ್ಲಿ ಶೋಕದ ಛಾಯೆ ಆವರಿಸಿದೆ. ಹಿರಿಯೂರು ಶಾಸಕರೂ ಆಗಿದ್ದ ಸುಧಾಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಹಿರಿಯೂರು ನಗರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಸಚಿವರ ಪಾರ್ಥಿವ ಶರೀರವು ಇಂದು ಮಧ್ಯಾಹ್ನ 12 ಗಂಟೆಗೆ ಹಿರಿಯೂರು ನಗರಕ್ಕೆ ತಲುಪಲಿದೆ. ನಗರದ ನೆಹರು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿ, ನೀರು ಹಾಕಿ ಸಿದ್ಧಪಡಿಸಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಿರಿಯೂರಿನಲ್ಲಿ ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಚಳ್ಳಕೆರೆಗೆ ರವಾನಿಸಲಾಗುವುದು. ನಾಳೆ (ಸೋಮವಾರ) ಡಿ. ಸುಧಾಕರ್ ಕ್ರೀಡಾಂಗಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಸಚಿವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಪ್ತತೆಯನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರದ ಹಿರಿಯ ನಾಯಕ ಸುಧಾಕರ್ ಅವರ ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಅವರು ಗುಣಮುಖರಾಗುವ ಭರವಸೆ ಇತ್ತು. ಜನಸೇವೆಯಲ್ಲಿ ಅಪಾರ ಬದ್ಧತೆ ಹೊಂದಿದ್ದ ಅವರು ಇನ್ನಷ್ಟು ಕಾಲ ಜನರ ನಡುವೆ ಇರಬೇಕಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಂಬನಿ ಮಿಡಿದಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರು ಮಾತನಾಡಿ, ನನ್ನ ಆಪ್ತ ಸಹೋದ್ಯೋಗಿ ಸುಧಾಕರ್ ಅವರ ಅಗಲಿಕೆ ಅತೀವ ನೋವು ತಂದಿದೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಉತ್ತಮ ಜನಪರ ಕೆಲಸ ಮಾಡಿದ್ದರು. ಅವರ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.