Select Location
All Locations
State
Region
City / District
ಕೊನೆಯ ಉಸಿರು ಇರುವ ತನಕ ವಿರಮಿಸಲ್ಲ: ಬಿ.ಎಸ್.ಯಡಿಯೂರಪ್ಪ

ಕೊನೆಯ ಉಸಿರು ಇರುವ ತನಕ ವಿರಮಿಸಲ್ಲ: ಬಿ.ಎಸ್.ಯಡಿಯೂರಪ್ಪ

ಚಿತ್ರದುರ್ಗ: ಜನರ ಪ್ರೀತಿಯಿಂದಲೇ ಮುಂದೆ ಬಂದಿರುವ ಈ ಜೀವನದಲ್ಲಿ ಕೊನೆಯುಸಿರು ಇರುವ ತನಕ ವಿರಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ‘ಬಿಎಸ್‌ವೈ ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಭಿಮಾನೋತ್ಸವವು ನನ್ನ ವೈಯಕ್ತಿಕ ಸಂಭ್ರಮವಲ್ಲ. ನಾವೆಲ್ಲರೂ ಒಟ್ಟಿಗೆ ನಡೆಸಿದ ಸಂಘರ್ಷದ ಹೋರಾಟದ ಸ್ಮರಣೆ ಈ ಕಾರ್ಯಕ್ರಮ. ಶಿಕಾರಿಪುರದಿಂದ ಆರಂಭವಾದ ನನ್ನ ರಾಜಕೀಯ ಪಯಣವು ಎಲ್ಲ ಕಾರ್ಯಕರ್ತರ ಪರಿಶ್ರಮದ ಫಲವಾಗಿದೆ. ಇದು ನನ್ನ ಜೀವನದ ಪರ್ವ ದಿನ, ಅಭಿಮಾನದಲ್ಲಿ ತೇಲಿಸಿದ ದಿನ. ನೀವೆಲ್ಲರೂ ಹೆತ್ತು ಬೆಳೆಸಿದ ಮಗನಾಗಿ ನಿಮ್ಮೆದುರು ನಿಂತಿದ್ದೇನೆ. ಮದಕರಿ ನಾಯಕ, ಓಬವ್ವನ ಐತಿಹಾಸಿಕ ಚಿತ್ರದುರ್ಗದಲ್ಲಿ ಕನ್ನಡದ ಮೂಲೆಮೂಲೆಯಿಂದ ಹರಿದುಬಂದಿರುವ ನಿಮ್ಮ ಮುಂದೆ ಮಾತು ಹೊರಡುತ್ತಿಲ್ಲ. 

ಇದಕ್ಕಾಗಿ ಜನ್ಮಜನ್ಮಾಂತರಕ್ಕೂ ನಿಮಗೆ ಋಣಿಯಾಗಿದ್ದೇನೆ. ಅತ್ಯಂತ ಬಿಡುವಿಲ್ಲದ ಚಟುವಟಿಕೆ ನಡುವೆಯೇ ಕಾರ್ಯಕ್ರಮ್ಕಕೆ ಆಗಮಿಸಿದ್ದಕ್ಕೆ ಅಮಿತ್‌ ಶಾ ಅವರಿಗೆ ಧನ್ಯವಾದಗಳು ಎಂದರು. ಕಳೆದ 10-15 ದಿನಗಳಿಂದ ಅನೇಕ ಹಿತೈಷಿಗಳು, ಅಭಿಮಾನಿಗಳು ಪತ್ರಿಕೆಗಳಲ್ಲಿ ನನ್ನ ಕುರಿತು ಲೇಖನ ಬರೆದು ನಾಡಿಗೆ ತಿಳಿಸಿಕೊಟ್ಟಿದ್ದೀರಿ. ಹೋರಾಟವೇ ನನ್ನ ಶಕ್ತಿ. ನಿಮ್ಮ ಯಡಿಯೂರಪ್ಪ ಚಿನ್ನದ ಚಮಚ ಇಟ್ಟುಕೊಂಡು ಬರಲಿಲ್ಲ, ಅನಿರೀಕ್ಷಿತ ತಿರುವಿನಲ್ಲಿ ನಾಡಿನ ಜನಸೇವೆಗೆ ಸಮರ್ಪಿಸಿಕೊಂಡವನು. ನನ್ನ ತಾಯಂದಿರ, ಸಹೋದರಿಯರ ಕಣ್ಣೀರೊರೆಸಲು ಸಂಕಲ್ಪ ತೊಟ್ಟು ಮುನ್ನಡೆದೆ. ಭಾಗ್ಯಲಕ್ಷ್ಮಿ ಬಾಂಡ್‌ ತಂದಿದ್ದು ಹಾಗೂ ಕೃಷಿ ಬಜೆಟ್‌ ಮಂಡಿಸಿದ್ದು ನನ್ನ ಜೀವನದ ಸಾರ್ಥಕ ಭಾವನೆ. ಇದಕ್ಕೆ ನನಗೆ ಸಂಸ್ಕಾರ, ಸಹಕಾರ ನೀಡಿದ್ದು ಆರ್‌ಎಸ್‌ಎಸ್‌ ಸಿದ್ಧಾಂತ ಹಾಗೂ ಸಂಘಟನೆಯ ಕಾರ್ಯಕರ್ತರು. ನಾಡಿನ ಜನರೇ ನನ್ನನ್ನು ಹರಸಿದರು, ಬೆಳೆಸಿದರು. ಇವ ನಮ್ಮವ ನಮ್ಮವ ಎಂದು ಜನರು ಅಪ್ಪಿಕೊಂಡಿದ್ದರಿಂದ ಈ ಜೀವನ ನಡೆದಿದೆ. 

ಐವತ್ತು ವರ್ಷ ನನ್ನನ್ನು ಸಲಹಿದ್ದೀರಿ, ಹೋರಾಟಕ್ಕೆ ಶಕ್ತಿ ನೀಡಿದ್ದೀರಿ. ಈ ಋಣವನ್ನು ಎಂದಿಗೂ ತೀರಿಸಲಾಗದು. ಕೊನೆಯ ಉಸಿರಿರುವ ತನಕ ನಾನು ವಿರಮಿಸುವುದಿಲ್ಲ. ದೇವರು ಶಕ್ತಿ ಕೊಟ್ಟಿರುವ ತನಕ ಸಂಘಟನೆ, ದೇಶ, ಪಕ್ಷದ ಏಳಿಗೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರಾಜ್ಯದಲ್ಲಿ ಪ್ರವಾಸ ಮಾಡಿ ಜನರನ್ನು ಸಂಪರ್ಕಿಸಿ ದೇಶವನ್ನು ಬಲಪಡಿಸಲು ಶ್ರಮಿಸುತ್ತೇನೆ ಎಂದರು. ಟೀಂ ಮೋದಿಗೆ ಅಭಿನಂದನೆ ಸರ್ದಾರ್‌ ವಲ್ಲಭಭಾಯಿ ಪಟೇಲರ ನಂತರ ದೇಶದ ಉಕ್ಕಿನ ಮನುಷ್ಯ ಎಂದರೆ ಅಮಿತ್‌ ಶಾ ಎಂದು ಬಿ.ಎಸ್‌. ಯಡಿಯೂರಪ್ಪ ಶ್ಲಾಘಿಸಿದರು. ಅಮಿತ್‌ ಶಾ ಅವರು ಮದಕರಿನಾಯಕರಂತೆ ಕಂಗೊಳಿಸುತ್ತಿದ್ದಾರೆ. ವಿಶ್ವ ನಾಯಕ ಮೋದಿಯವರಿಗೆ ಹೆಗಲು ಕೊಟ್ಟು ರಾಷ್ಟ್ರವನ್ನು ಉಳಿಸಲು ದುಡಿಯುತ್ತಿದ್ದಾರೆ. ಪಶ್ಚಿಮ ಬಂಗಾಳ ನುಸುಳುಕೋರರ ಹಾವಳಿಯಿಂದ ಸವಾಲಾಗಿತ್ತು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆದಿರಲಿಲ್ಲ.

ಹಿಂದೆಂದೂ ಕಾಣದಂತೆ ಅಲ್ಲಿ ಯಶಸ್ವಿಯಾಗಿ ಚುನಾವಣೆ ನಡೆಸಿ, ಇದು ಬಿಜೆಪಿಯ ವಿಜಯವಲ್ಲ, ಭಾರತದ ವಿಜಯ ಎಂದು ಸಾರಿದ್ದಾರೆ. ಶಾಮಮುಖರ್ಜಿ ಅವರ ನೆಲದಲ್ಲಿ ಬಿಜೆಪಿ ಸರ್ಕಾರ ಮಾಡಿದ್ದಕ್ಕಾಗಿ ನೂರಾರು ಆತ್ಮಗಳು ಸಂತೃಪ್ತ ಭಾವ ಹೊಂದಿವೆ. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಜೋಡಿ ಶತಕೋಟಿ ಭಾರತೀಯರಲ್ಲಿ ರೋಮಾಂಚನ ತರಿಸಿದೆ. ಇಬ್ಬರಿಗೂ ಕರ್ನಾಟಕದ ಜನತೆಯ ಪರವಾಗಿ ಹೃದಯತುಂಬಿ ಅಭಿನಂದನೆ ಸಲ್ಲಿಸುತ್ತೇನೆ. ಒಂದೆಡೆ ಪ್ರಧಾನಿ ಮೋದಿಯವರು ಅವತಾರ ಪುರುಷರಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ, ಅವರ ಜೊತೆಗೆ ಕೇಂದ್ರದ ಸಂಪುಟದ ಸಚಿವರು, ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಸಂಪೂರ್ಣ ಸಮರ್ಪಿಸಿಕೊಂಡು ದುಡಿಯುತ್ತಿದ್ದಾರೆ. ಭಾರತದ ಕನಸು ಸಾಕಾರವಾಗುವ ವಿಶ್ವಾಸವನ್ನು ಈ ತಂಡ ಮೂಡಿಸಿದೆ ಎಂದು ಹೇಳಿದರು.


Udayavani 1 hour ago
Home Flash News