Select Location
All Locations
State
Region
City / District
ಕ್ಯಾನ್ಸರ್‌ ಇದ್ದಾಗಲೂ ನನಗಾಗಿ ʼಪೆದ್ದಿʼ ಚಿತ್ರತಂಡ ಕಾದಿತ್ತು.. ಶಿವರಾಜ್‌ ಕುಮಾರ್

ಕ್ಯಾನ್ಸರ್‌ ಇದ್ದಾಗಲೂ ನನಗಾಗಿ ʼಪೆದ್ದಿʼ ಚಿತ್ರತಂಡ ಕಾದಿತ್ತು.. ಶಿವರಾಜ್‌ ಕುಮಾರ್

ಹೈದರಾಬಾದ್/ಚೆನ್ನೈ: ʼಉಪ್ಪೇನಾʼ ಖ್ಯಾತಿಯ ಬುಚ್ಚಿ ಬಾಬು ಸನಾ (Buchi Babu Sana) ನಿರ್ದೇಶನದ, ಬಹುನಿರೀಕ್ಷಿತ 'ಪೆದ್ದಿ' (Peddi Movie) ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಪ್ಯಾನ್‌ ಇಂಡಿಯಾದಲ್ಲಿ ತೆರೆ ಕಾಣಲಿರುವ ಚಿತ್ರದಲ್ಲಿ ಕನ್ನಡದ ಶಿವರಾಜ್‌ ಕುಮಾರ್‌ (Shiva Rajkumar) ಪ್ರಮುಖ ಪಾತ್ರವನ್ನು ಮಾಡಲಿದ್ದಾರೆ. ಶಿವಣ್ಣ ಅವರಿಗೆ ಸೌತ್‌ನಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ʼಜೈಲರ್‌ʼನಲ್ಲಿನ ಅವರ ನರಸಿಂಹ ಪಾತ್ರ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದರು. ಈಗ ಅಂತಹದ್ದೇ ಖಡಕ್‌ ರೋಲ್‌ ʼಪೆದ್ದಿʼಯಲ್ಲಿ ಮಾಡಲಿದ್ದಾರೆ. ಆದರೆ ʼಪೆದ್ದಿʼಯನ್ನು ಶಿವಣ್ಣ ಒಪ್ಪಿಕೊಂಡಿದ್ರೂ, ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಅನುಮಾನವೆನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಬಗ್ಗೆ ಶಿವಣ್ಣ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಪ್ರಚಾರದಲ್ಲಿ ಮಾತನಾಡಿದ್ದಾರೆ.

ಶಿವಣ್ಣ ತಮ್ಮ ಕ್ಯಾನ್ಸರ್ ಕಾಯಿಲೆಯ ದಿನಗಳನ್ನು ನೆನೆದು ಭಾವುಕರಾದರು. ತಮಗೆ ಕ್ಯಾನ್ಸರ್ ಪತ್ತೆಯಾದಾಗ ಚಿತ್ರದಿಂದ ಬಹುತೇಕ ಹೊರನಡೆಯಲು ನಿರ್ಧರಿಸಿದ್ದಾಗಿ, ಆದರೆ ಚಿತ್ರತಂಡವು ತಮ್ಮ ಮೇಲಿನ ನಂಬಿಕೆಯಿಂದ ಕಾಯ್ದು ಜೊತೆಗೆ ನಿಂತಿತು ಎಂದು ಅವರು ಬಹಿರಂಗಪಡಿಸಿದ್ದಾರೆ. ಕ್ಯಾನ್ಸರ್ ಪತ್ತೆಯಾದಾಗ 'ಪೆದ್ದಿ' ಚಿತ್ರ ಬಿಡಲು ಮುಂದಾಗಿದ್ದ ಶಿವಣ್ಣ: ಚೆನ್ನೈನಲ್ಲಿ ನಡೆದ 'ಪೆದ್ದಿ' ಚಿತ್ರದ ಪ್ರಚಾರದ ವೇಳೆ ಮಾತನಾಡಿದ ಶಿವರಾಜ್‌ಕುಮಾರ್, 2024 ರಲ್ಲಿ ತಮಗೆ ಕ್ಯಾನ್ಸರ್ ಇರುವುದು ಪತ್ತೆಯಾಗುವ ಮುನ್ನವೇ ಈ ಚಿತ್ರಕ್ಕೆ ಸಹಿ ಮಾಡಿದ್ದಾಗಿ ತಿಳಿಸಿದರು. ಬುಚ್ಚಿ ಬಾಬು ಅವರು ಕಥೆ ಹೇಳಿದ ತಕ್ಷಣವೇ ತಮಗೆ ಕಥೆ ಇಷ್ಟವಾಗಿತ್ತು ಮತ್ತು ಆರಂಭಿಕ ಹಂತದಲ್ಲಿ ನಟ ರಾಮ್ ಚರಣ್ ಅವರೊಂದಿಗೂ ಮಾತನಾಡಿದ್ದಾಗಿ ಹೇಳಿದರು. "ಅವರಿಗೆ (ಪೆದ್ದಿ ಚಿತ್ರತಂಡ) ನನ್ನೊಂದಿಗೇ ಈ ಸಿನಿಮಾ ಮಾಡಬೇಕೆಂಬ ಹಂಬಲವಿತ್ತು. ಬುಚ್ಚಿ ಬಾಬು ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಅಂದೇ ನಾನು ರಾಮ್ ಚರಣ್ ಅವರೊಂದಿಗೂ ಮಾತನಾಡಿದ್ದೆ. ಆದರೆ, ಅದಾದ ನಂತರ ದುರಾದೃಷ್ಟವಶಾತ್ ನನಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು ಮತ್ತು ಚಿಕಿತ್ಸೆಗಾಗಿ ನಾನು ಅಮೆರಿಕಾಗೆ ಹೋಗಬೇಕಾಯಿತು" ಎಂದು ಶಿವಣ್ಣ ತಿಳಿಸಿದರು.

ತಮ್ಮ ಆರೋಗ್ಯದ ಸ್ಥಿತಿಯಿಂದಾಗಿ ಸಿನಿಮಾದಿಂದ ಹೊರಬರಲು ಯೋಚಿಸಿದ್ದಾಗಿ ಒಪ್ಪಿಕೊಂಡ ಶಿವಣ್ಣ, "ನಾನು ಚಿತ್ರತಂಡದವರ ಬಳಿ, 'ನಾವು ಈ ಒಪ್ಪಂದವನ್ನು ರದ್ದುಗೊಳಿಸೋಣವೇ?' ಎಂದು ಕೇಳಿದ್ದೆ. ಆದರೆ ಬುಚ್ಚಿ ಬಾಬು, 'ಇಲ್ಲ ಸರ್, ನಮಗೆ ನೀವೇ ಬೇಕು' ಎಂದರು. ಚಿತ್ರತಂಡದ ಈ ಗುಣ ನಿಜಕ್ಕೂ ಅದ್ಭುತ. ನನಗಾಗಿ ಅವರು ಸುದೀರ್ಘ ಕಾಲ ಕಾಯ್ದರು. ಅವರಿಗೆ ನಾನು ಸದಾ ಕೃತಜ್ಞನಾಗಿರುತ್ತೇನೆ. ಇದೊಂದು ಸುಂದರ ಪಯಣ" ಎಂದು ಧನ್ಯವಾದ ಅರ್ಪಿಸಿದರು. ಶಿವಣ್ಣನ ಸ್ಕ್ರೀನ್ ಪ್ರೆಸೆನ್ಸ್ ಕೊಂಡಾಡಿದ ರಾಮ್ ಚರಣ್: ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಟಾಲಿವುಡ್ ಸ್ಟಾರ್ ರಾಮ್ ಚರಣ್, ಶಿವಣ್ಣ ಅವರ ಅದ್ಭುತ ನಟನೆ ಹಾಗೂ 'ಜೈಲರ್' ಚಿತ್ರದ ಅವರ ಅತಿಥಿ ಪಾತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.


Udayavani 12 hours ago
Home Flash News