DKS CM Oath: ವಿಧಾನಸೌಧದ ಮುಂದೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ರದ್ದು!
ಬೆಂಗಳೂರು: ನಾಡಿನ ನೂತನ ಮುಖ್ಯಮಂತ್ರಿ ಮತ್ತು ಸಂಪುಟ ಸದಸ್ಯರ ಪ್ರಮಾಣವಚನಕ್ಕೆ ಮುಹೂರ್ತ ನಿಗದಿಯಾಗಿದ್ದು ಜೂ.3 ರ ಬುಧವಾರ ಲೋಕಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಪದಗ್ರಹಣ ಆಗಲಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ ಹಾಗೂ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡದಿರಲು ಪಕ್ಷದ ವತಿಯಿಂದ ತೀರ್ಮಾನಿಸಿದ್ದು, ವಿಧಾನಸೌಧದ ಭವ್ಯಮೆಟ್ಟಿಲುಗಳ ಮೇಲೆ ನಡೆಸಲು ಉದ್ದೇಶಿಸಿದ್ದ ಸಮಾರಂಭವನ್ನೂ ರದ್ದುಪಡಿಸಲಾಗಿದೆ. ಅದರ ಬದಲು ಲೋಕಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪ್ರಮಾಣ ವಚನ ಬೋಧಿಸಲಿದ್ದು, ಆಡಳಿತ ಪಕ್ಷದ ಶಾಸಕರು, ಮತ್ತವರ ಕುಟುಂಬ ಸದಸ್ಯರು, ವಿರೋಧ ಪಕ್ಷದ ನಾಯಕರು, ಜೆಡಿಎಸ್ ನಾಯಕರು ಸೇರಿದಂತೆ ಗಣ್ಯರಿಗೆ ಮಾತ್ರ ಆಹ್ವಾನ ನೀಡಲು ನಿರ್ಧರಿಸಲಾಗಿದೆ. ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ವಕ್ತಾರ ರಮೇಶ್ ಬಾಬು ಅವರು, ಪದಗ್ರಹಣ ಕಾರ್ಯಕ್ರಮದ ಕುರಿತು ಪೂರ್ವತಯಾರಿ ಸಭೆ ನಡೆಸಿ ಪಕ್ಷದ ನಿರ್ಣಯವನ್ನು ತಿಳಿಸಿದರು. ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಿರುವುದಾಗಿಯೂ ಹೇಳಿದರು. ವಿಧಾನಸೌಧಕ್ಕೆ ಬರಬೇಡಿ: ಕಾರ್ಯಕರ್ತರಿಗೆ ಮನವಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಗೊಂದಲ ಮಾಡಿಕೊಳ್ಳಬೇಡಿ. ಯಾರೂ ರಾಜಭವನ ಅಥವಾ ವಿಧಾನಸೌಧಕ್ಕೆ ಬಾರದಂತೆ ಮನವಿ ಮಾಡಿದರಲ್ಲದೆ, ಇದು ಪಕ್ಷದ ನಿರ್ಧಾರ ಆಗಿರುವುದು. ಎಲ್ಲರೂ ಇದಕ್ಕೆ ಗೌರವ ಕೊಡುವಂತೆಯೂ ಕೋರಿದರು. ಅನಾವಶ್ಯಕ ಗೊಂದಲಗಳಿಗೆ ಅವಕಾಶ ಕೊಡುವುದು ಬೇಡ. ಇಡೀ ಸರ್ಕಾರವೇ ನಿಮ್ಮ- ನಿಮ್ಮ ಜಿಲ್ಲೆಗಳಿಗೆ ಬರಲಿದೆ ಎಂದೂ ಭರವಸೆ ನೀಡಿದರು.
ಜನಾಶೀರ್ವಾದ ಪಡೆಯಲು ಎಲ್ಲ ಜಿಲ್ಲೆಗೂ ಸಿಎಂ ಭೇಟಿ ಗ್ಯಾರಂಟಿ ಸೇರಿದಂತೆ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಉತ್ತಮ ಆಡಳಿತ ಕೊಟ್ಟಿದ್ದೇವೆ. ಎಲ್ಲವನ್ನೂ ಮುಂದುವರಿಸಿಕೊಂಡು ಹೋಗುವ ಭರವಸೆಯೊಂದಿಗೆ ಹೊಸ ಸಿಎಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಳಿಕ ರಾಜ್ಯ ಎಲ್ಲ ಜಿಲ್ಲಾ ಕೇಂದ್ರಗಳಿಗೂ ಹೊಸ ಸಿಎಂ ಬರುತ್ತಾರೆ. ಪ್ರತಿ ಜಿಲ್ಲೆಯಲ್ಲೂ ಸರಳ ಸಮಾರಂಭ ಮಾಡಿ, ಅಲ್ಲೇ ಜನರ ಆಶೀರ್ವಾದ ಪಡೆಯಲಿದ್ದಾರೆ ಎಂದು ಪಕ್ಷದ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ವಕ್ತಾರ ರಮೇಶ್ ಬಾಬು ತಿಳಿಸಿದರು. ಸಿಎಲ್‌ಪಿ ಸಭೆಗೆ ಮುನ್ನವೇ ಗೌರ್ನರ್ ಭೇಟಿಯಾಗಿದ್ದ ಡಿಕೆಶಿ ಶನಿವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿತ್ತು. ಅಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಘೋಷಣೆ ಮಾಡಲಿದ್ದರು. ಆದರೆ, ಶನಿವಾರ ಬೆಳಗ್ಗೆಯೇ ಲೋಕಭವನಕ್ಕೆ ತೆರಳಿದ್ದ ಡಿ.ಕೆ. ಶಿವಕುಮಾರ್ ಹಾಗೂ ಸಹೋದರ ಡಿ.ಕೆ.ಸುರೇಶ್ ಅವರು ರಾಜ್ಯಪಾಲರ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಜೂ.31ರಂದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯೇ ರಾಜ್ಯಪಾಲರು ತೆರಳುವ ಸುಳಿವು ಪಡೆದು ಬೆಳ್ಳಂಬೆಳಗ್ಗೆ ಲೋಕಭವನಕ್ಕೆ ಭೇಟಿ ನೀಡಿದ್ದರು. ಜೂ.1 ಅಥವಾ 3 ಅಥವಾ 5 ರಂದು ಸರ್ಕಾರ ರಚಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಹಕ್ಕುಮಂಡನೆಗೆ ಅವಕಾಶ ಕೋರಬೇಕಿದೆ ಎಂಬುದನ್ನೂ ಮನವರಿಕೆ ಮಾಡಿಕೊಟ್ಟಿದ್ದರು. ಅಜ್ಜಯ್ಯನ ಮಠಕ್ಕೆ ಡಿಕೆಶಿ ಭೇಟಿ: ಪ್ರಮಾಣ ವಚನ ಸ್ವೀಕಾರ ದಿನಾಂಕ ಫಿಕ್ಸ್ ಶನಿವಾರ ಬೆಳಗ್ಗೆ ಲೋಕಭವನಕ್ಕೆ ತೆರಳಿದ್ದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಲ್ಲಿಂದ ನೇರವಾಗಿ ಬೆಂಗಳೂರಿನ ನಾಗರಬಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ದಿನಾಂಕ ಹಾಗೂ ಸಮಯವನ್ನು ಖಚಿತಪಡಿಸಿಕೊಂಡರು. ಅಷ್ಟೇ ಅಲ್ಲದೆ, ಅಜ್ಜಯ್ಯ ನೀಡಿರುವ ಸಲಹೆಗಳನ್ನು ಚಾಚೂತಪ್ಪದೆ ಪಾಲಿಸಲು ನಿರ್ಧರಿಸಿರುವ ಅವರು, ಅದ್ಧೂರಿ ಕಾರ್ಯಕ್ರಮ ಬೇಡ ಎಂಬುದನ್ನೂ ಒಪ್ಪಿಕೊಂಡು ಸರಳ ಸಮಾರಂಭದಲ್ಲೇ ಪ್ರಮಾಣ ವಚನ ಸ್ವೀಕಾರಕ್ಕೆ ತೀರ್ಮಾನಿಸಿಕೊಂಡಿದ್ದಾರೆ.