ಟ್ರಂಪ್ ಆದೇಶಂದಂತೆ ಇರಾನ್‌ನ 10 ತಾಣಗಳ ಮೇಲೆ ದಾಳಿ: ಅಮೆರಿಕ ಸೇನೆ
ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ ಇರಾನ್‌ನ 10 ಸೇನಾ ನೆಲೆಗಳ ಮೇಲೆ ದಾಳಿ ಮಾಡಿರುವುದಾಗಿ ಅಮೆರಿಕ ಸೇನೆ ಶನಿವಾರ ತಿಳಿಸಿದೆ. ವಾಣಿಜ್ಯ ಹಡಗುಗಳ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ಕಣ್ಗಾವಲು ವ್ಯವಸ್ಥೆ, ಸಂವಹನ ಮೂಲಸೌಕರ್ಯ, ವಾಯು ರಕ್ಷಣಾ ತಾಣಗಳು, ಡ್ರೋನ್ ಸಂಗ್ರಹಾಗಾರ ಸೇರಿದಂತೆ ಹಲವು ನೆಲೆಗಳನ್ನು ಗುರಿಯಾಗಿಸಿ ವಾಯುಪಡೆ ದಾಳಿ ನಡೆಸಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿತ್ತು. ನಂತರ, ಹೊರ್ಮುಜ್ ಜಲಸಂಧಿ ಹಾಗೂ ಅದರ ಆಸುಪಾಸಿನಲ್ಲೇ ಇರುವ 10 ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಖಚಿತಪಡಿಸಿದೆ.
ದಕ್ಷಿಣ ಇರಾನ್‌ನ ಸಿರಿಕ್ ನಗರದಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ಅಲ್ಲಿನ ಸುದ್ದಿಸಂಸ್ಥೆ ʼಐಆರ್‌ಐಬಿʼ ವರದಿ ಮಾಡಿದೆ. ಆದರೆ, ದಾಳಿಯಿಂದ ಆಗಿರುವ ಪರಿಣಾಮಗಳ ಬಗ್ಗೆ ಯಾವುದೇ ಉಲ್ಲೇಖ ಅದರಲ್ಲಿ ಇಲ್ಲ. ಫೆಬ್ರುವರಿ ಅಂತ್ಯದಲ್ಲಿ ಆರಂಭವಾದ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಶಾಂತಿ ಒಪ್ಪಂದಗಳು ಏರ್ಪಟ್ಟ ನಂತರವೂ ದಾಳಿ, ಪ್ರತಿದಾಳಿ ಆಗುತ್ತಿರುವುದು ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ ಸೃಷ್ಟಿಸಿದೆ. ಇರಾನ್ ಸೇನೆ ಕದನ ವಿರಾಮ ಉಲ್ಲಂಘಿಸಿದ್ದಕ್ಕಾಗಿ ಪ್ರತಿದಾಳಿ ನಡೆಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಹೇಳಿದ್ದಾರೆ.